ಮಂಗಳೂರು : ಮಂಗಳೂರಿನ ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರತಿಯೊಂದು ವಾರ್ಡ್‌ನಲ್ಲೂ ಭಾರತ್ ಜೋಡೋ ಯುವ ಸಂಘಟನೆಯನ್ನು ರಚಿಸಿ, ಹೆಚ್ಚಿನ ಸಂಖ್ಯೆಯಲ್ಲಿ ಯುವಕರನ್ನು ನೋಂದಾಯಿಸಲು ಕಾಂಗ್ರೆಸ್ ಪಕ್ಷದಿಂದ ಆಂದೋಲನ ರೂಪದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಕಾಂಗ್ರೆಸ್ ಪಕ್ಷದ ಯುವ ಸಂಘಟನೆಯ ಉಸ್ತುವಾರಿ ಐವನ್ ಡಿʼಸೋಜಾ ತಿಳಿಸಿದ್ದಾರೆ. ಮುಂದಿನ ಪೀಳಿಗೆಯಲ್ಲಿ ಯುವ ನಾಯಕತ್ವವನ್ನು ಬೆಳೆಸುವ ನಿಟ್ಟಿನಲ್ಲಿ ಈ ಸಂಘಟನೆಗಳು ಪ್ರಮುಖ ಪಾತ್ರ ವಹಿಸಲಿವೆ ಎಂದು ಅವರು ಹೇಳಿದ್ದಾರೆ.
ಪ್ರತಿ 10 ಸಾವಿರ ಜನಸಂಖ್ಯೆಗೆ ಒಂದು ಭಾರತ್ ಜೋಡೋ ಯುವ ಸಂಘಟನೆಯನ್ನು ರಚಿಸುವ ಮೂಲಕ ಯುವಕರಲ್ಲಿ ಕ್ರೀಡೆ, ಸಾಂಸ್ಕೃತಿಕ, ಸಾಂಪ್ರದಾಯಿಕ ಹಾಗೂ ಸಾಮಾಜಿಕ ಚಟುವಟಿಕೆಗಳಿಗೆ ಉತ್ತೇಜನ ನೀಡುವುದು ಇದರ ಮುಖ್ಯ ಉದ್ದೇಶವಾಗಿದೆ. ಈಗಾಗಲೇ ಪ್ರತಿ ಸಂಘಟನೆಗೆ ರೂ.10 ಲಕ್ಷಗಳ ಅನುದಾನ ನೀಡುವ ಅವಕಾಶವನ್ನು ರಾಜ್ಯ ಸರ್ಕಾರ ಕಲ್ಪಿಸಿದ್ದು, ಈ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಐವನ್ ಡಿʼಸೋಜಾ ಕರೆ ನೀಡಿದ್ದಾರೆ. 203ನೇ ದಕ್ಷಿಣ ವಿಧಾನಸಭಾ ಕ್ಷೇತ್ರದ ಕೋ-ಆರ್ಡಿನೇಟರ್‌ಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಸ್ತುತ ಆನ್‌ಲೈನ್ ನೋಂದಣಿ ಪ್ರಕ್ರಿಯೆ ಸ್ಥಗಿತಗೊಂಡಿರುವುದರಿಂದ ಆಫ್‌ಲೈನ್ ಮೂಲಕ ಅರ್ಜಿ ಭರ್ತಿ ಮಾಡಿಸಿ, ಎಲ್ಲಾ ಸಮುದಾಯಗಳ ಯುವಕರನ್ನು ಒಳಗೊಂಡ ಸಂಘಟನೆಗಳನ್ನು ಶೀಘ್ರವಾಗಿ ರಚಿಸಲು ಸೂಚಿಸಿದ್ದಾರೆ.
ಇದೇ ಸಂದರ್ಭದಲ್ಲಿ SIR ಪ್ರಕ್ರಿಯೆಯಲ್ಲಿ ಹೆಸರು ನೋಂದಣಿ ಹಾಗೂ ಹೆಸರು ಬಿಟ್ಟುಹೋಗಿರುವ ಕುರಿತು ಉಂಟಾದ ಸಮಸ್ಯೆಗಳನ್ನು ಕಂದಾಯ ವಿಭಾಗದ ಇನ್ಸ್‌ಪೆಕ್ಟರ್ ಸಂತೋಷ್ ಅವರ ಗಮನಕ್ಕೆ ತಂದು ಪರಿಹರಿಸಲಾಯಿತು ಹಾಗೂ ನೋಡೆಲ್ ಅಧಿಕಾರಿ ಶಾಹಿದಾ ನಜೀರಾ ಅವರು ಈ ಕುರಿತು ಮಾಹಿತಿ ನೀಡಿದರು. ಈ ಸಭೆಯಲ್ಲಿ ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಕಾರ್ಪೊರೇಟರ್‌ಗಳಾದ ಪ್ರವೀಣ್ ಚಂದ್ರ ಆಳ್ವ, ಶಂಶುದ್ದೀನ್ ಕುದ್ರೋಳಿ, ಕೇಶವ ಮರೋಳಿ, ಅಶೋಕ್ ಕುಮಾರ್ ಡಿ.ಕೆ., ಭಾಸ್ಕರ್ ರಾವ್, ಸತೀಶ್ ಪೆಂಗಲ್, ತನ್ವೀರ್ ಶಾ, ಚೇತನ್ ಕುಮಾರ್, ಹೇಮಂತ್ ಗರೋಡಿ, ತರಬೇತುದಾರರು, ಕೋ-ಆರ್ಡಿನೇಟರ್‌ಗಳು ಮತ್ತು ಪಕ್ಷದ ನಾಯಕರು ಉಪಸ್ಥಿತರಿದ್ದರು.