image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೌಶಲ್ಯವನ್ನು ಉದ್ಯಮವಾಗಿ ಪರಿವರ್ತಿಸಿ ಅಸಾಮಾನ್ಯ ಸಾಧನೆ ಮಾಡಿ: ಪ್ರತಾಪ್ ಸಿಂಹ ನಾಯಕ್

ಕೌಶಲ್ಯವನ್ನು ಉದ್ಯಮವಾಗಿ ಪರಿವರ್ತಿಸಿ ಅಸಾಮಾನ್ಯ ಸಾಧನೆ ಮಾಡಿ: ಪ್ರತಾಪ್ ಸಿಂಹ ನಾಯಕ್

ಉಜಿರೆ : ಉಜಿರೆಯ ಸಿದ್ಧವನದ ರುಡ್‌ಸೆಟ್ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ 1000ನೇ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ಹಾಗೂ 998ನೇ ಕಂಪ್ಯೂಟರ್ ಅಕೌಂಟಿಂಗ್ (ಟ್ಯಾಲಿ) ತರಬೇತಿ ತಂಡಗಳ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ವಿಧಾನ ಪರಿಷತ್ತಿನ ನಿಕಟಪೂರ್ವ ಸದಸ್ಯರು ಹಾಗೂ ಕೇಂದ್ರೀಯ ನೋಟರಿ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಾಮಾನ್ಯ ವ್ಯಕ್ತಿ ಅವಕಾಶಕ್ಕಾಗಿ ಕಾಯುತ್ತಾನೆ, ಆದರೆ ಅಸಾಮಾನ್ಯ ವ್ಯಕ್ತಿ ಅವಕಾಶವನ್ನು ಸೃಷ್ಟಿಸಿಕೊಳ್ಳುತ್ತಾನೆ ಎಂದ ಅವರು, ಶಿಬಿರಾರ್ಥಿಗಳು ಪಡೆದ ಕೌಶಲ್ಯವನ್ನು ಕೇವಲ ಉದ್ಯೋಗಕ್ಕಾಗಿ ಬಳಸದೆ, ಉದ್ಯೋಗ ಸೃಷ್ಟಿಸುವ ಶಕ್ತಿಯಾಗಿ ಪರಿವರ್ತಿಸಿಕೊಳ್ಳಬೇಕು ಎಂದು ಕರೆ ನೀಡಿದರು. ತರಬೇತಿ ಕೇಂದ್ರದಲ್ಲಿ ಕಲಿತ ಜ್ಞಾನವನ್ನು ಬದುಕಿನಲ್ಲಿ ಮತ್ತು ಮಾರುಕಟ್ಟೆಯಲ್ಲಿ ಬಳಸಿ ಆದಾಯ ಗಳಿಸಿದಾಗ ಮಾತ್ರ ತರಬೇತಿಗೆ ನಿಜವಾದ ಅರ್ಥ ಬರುತ್ತದೆ. ಪದವಿಯು ವಿದ್ಯಾರ್ಹತೆಯನ್ನು, ಕೌಶಲ್ಯವು ಸಾಮರ್ಥ್ಯವನ್ನು ತೋರಿಸಿದರೆ, ಕೆಲಸದ ಗುಣಮಟ್ಟವೇ ವ್ಯಕ್ತಿಯ ಗುರುತನ್ನು ನಿರ್ಮಿಸುತ್ತದೆ ಎಂದು ಅವರು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕ ಬಿ.ಪಿ. ವಿಜಯಕುಮಾರ್ ಅವರು ಮಾತನಾಡಿ, ಬಂಡವಾಳದ ಕೊರತೆಯಿದೆ ಎಂದು ಉದ್ಯಮದ ಕನಸನ್ನು ಕೈಬಿಡದೆ ಬ್ಯಾಂಕ್ ಸಾಲದ ನೆರವಿನಿಂದ ಉದ್ಯಮ ಆರಂಭಿಸಬಹುದು ಎಂದರು. ಫೋಟೋಗ್ರಫಿ, ವಿಡಿಯೋಗ್ರಫಿ, ಡ್ರೋನ್ ಸೇವೆ, ಎಡಿಟಿಂಗ್ ಹಾಗೂ ಕಂಪ್ಯೂಟರ್ ಅಕೌಂಟಿಂಗ್, GST ಮತ್ತು ಡಿಜಿಟಲ್ ಸೇವೆಗಳ ಮೂಲಕ ಸ್ವಂತ ಉದ್ಯಮ ಕಟ್ಟಿಕೊಳ್ಳಲು ಸಾಕಷ್ಟು ಅವಕಾಶಗಳಿವೆ ಎಂದು ವಿವರಿಸಿದರು. ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಗ್ರಾಮೀಣ ಯುವಜನರಿಗೆ ತರಬೇತಿ ನೀಡಲಾಗುತ್ತಿದ್ದು, 1000ನೇ ಫೋಟೋಗ್ರಫಿ–ವಿಡಿಯೋಗ್ರಫಿ ತರಬೇತಿ ತಂಡದ ಮೈಲಿಗಲ್ಲು ಸಂಸ್ಥೆಯ ನಾಲ್ಕು ದಶಕಗಳ ಸೇವಾ ಪಯಣದ ಪ್ರಮುಖ ಸಾಧನೆಯಾಗಿದೆ ಎಂದು ಹೇಳಿದರು.

ಈ ಫೋಟೋಗ್ರಫಿ ಮತ್ತು ವಿಡಿಯೋಗ್ರಫಿ ತರಬೇತಿಯು 2026ರ ಜುಲೈ 20ರಿಂದ ಆಗಸ್ಟ್ 29ರವರೆಗೆ ಹಾಗೂ ಕಂಪ್ಯೂಟರ್ ಅಕೌಂಟಿಂಗ್ ತರಬೇತಿಯು ಜುಲೈ 24ರಿಂದ ಆಗಸ್ಟ್ 31ರವರೆಗೆ ನೆರವೇರಿತು. ತರಬೇತಿ ಪೂರ್ಣಗೊಳಿಸಿದ ಶಿಬಿರಾರ್ಥಿಗಳಿಗೆ ಕಾರ್ಯಕ್ರಮದಲ್ಲಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ರುಡ್‌ಸೆಟ್ ಸಂಸ್ಥೆಯ ನಿರ್ದೇಶಕ ಶ್ರೀ ಸುನೀಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಬಿರಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಹಿರಿಯ ಉಪನ್ಯಾಸಕ ಕೆ. ಕರುಣಾಕರ ಜೈನ್ ಧನ್ಯವಾದ ಸಮರ್ಪಿಸಿದರು ಮತ್ತು ಹಿರಿಯ ಉಪನ್ಯಾಸಕ ಅಬ್ರಹಾಂ ಜೇಮ್ಸ್ ಕಾರ್ಯಕ್ರಮವನ್ನು ನಿರೂಪಿಸಿದರು.

Category
ಕರಾವಳಿ ತರಂಗಿಣಿ