ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕೆಲವೇ ಪಂಗಡಗಳಿಗೆ ಸೀಮಿತಗೊಳಿಸಲು ಸಾಧ್ಯವಿಲ್ಲ, ಅವರು ಇಡೀ ಮಾನವಕುಲಕ್ಕೆ ಸೇರಿದ ಲೋಕ ಸಂತರು ಎಂದು ಮೂಡಬಿದ್ರೆ ಶಾಸಕ ಉಮಾನಾಥ್ ಕೋಟ್ಯಾನ್ ಹೇಳಿದರು. ದಕ್ಷಿಣ ಕನ್ನಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಮಂಗಳೂರಿನ ಐತಿಹಾಸಿಕ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿ, ಜಾತಿ, ಮತ ಹಾಗೂ ಭೇದಭಾವಗಳನ್ನು ಬದಿಗಿರಿಸಿ 'ಒಂದೇ ಜಾತಿ, ಒಂದೇ ಮತ, ಒಂದೇ ದೇವರು' ಎಂಬ ಮಾನವೀಯ ತತ್ವವನ್ನು ಲೋಕಕ್ಕೆ ಸಾರಿದ ಮಹಾನ್ ಸಮಾಜ ಸುಧಾರಕ ನಾರಾಯಣ ಗುರುಗಳು. ಹಿಂದುಳಿದ ವರ್ಗದವರಿಗೆ ದೇವಾಲಯ ಪ್ರವೇಶ ಸೇರಿದಂತೆ ಸಾಮಾಜಿಕ ಸಮಾನತೆಯ ಹಕ್ಕುಗಳಿಗಾಗಿ ಶಾಂತಿಯುತ ಮಾರ್ಗದಲ್ಲಿ ಹೋರಾಡಿದವರು. ಮಹಾತ್ಮ ಗಾಂಧೀಜಿ ಮತ್ತು ರವೀಂದ್ರನಾಥ ಠಾಗೋರ್ ಅವರಂತಹ ಯುಗಪುರುಷರು ಗುರುಗಳ ವಿಚಾರಧಾರೆ ಮತ್ತು ವ್ಯಕ್ತಿತ್ವದಿಂದ ಪ್ರಭಾವಿತರಾಗಿದ್ದರು. ಗುರುಗಳ ಚಿಂತನೆಗಳು ಸಮಾಜಕ್ಕೆ ಸದಾ ದಾರಿದೀಪವಾಗಿದ್ದು, ಅವರ ಜಯಂತಿಯಲ್ಲಿ ಎಲ್ಲಾ ಸಮಾಜದವರೂ ಒಟ್ಟಾಗಿ ಭಾಗವಹಿಸಬೇಕು ಎಂದು ಕರೆ ನೀಡಿದರು.
ಮುಖ್ಯ ಉಪನ್ಯಾಸ ನೀಡಿದ ಉಡುಪಿಯ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೆಲ್ ಬೆಟ್ಟು, ಸಮಾಜವನ್ನು ಸಂಯಮದಿಂದ ಕಟ್ಟಿದ ಶ್ರೇಷ್ಠ ಸಂತ ಬ್ರಹ್ಮಶ್ರೀ ನಾರಾಯಣ ಗುರುಗಳು. ಅವರು ಸಾರಿದ ಸಮಾನತೆ, ಶಿಕ್ಷಣ ಹಾಗೂ ಮಾನವೀಯ ಚಿಂತನೆಗಳನ್ನು ಕೇವಲ ಮಾತುಗಳಿಗೆ ಸೀಮಿತಗೊಳಿಸದೆ ಸಮಾಜದ ಪ್ರತಿಯೊಂದು ಹಂತದಲ್ಲೂ ಅನುಷ್ಠಾನಗೊಳಿಸುವುದು ಅತ್ಯಗತ್ಯ ಎಂದು ಹೇಳಿದರು.
ಶಾಸಕ ಡಿ. ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕರಾವಳಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಂ.ಎ. ಗಫೂರ್, ಕರ್ನಾಟಕ ಪರಿಸರ ಪ್ರವಾಸೋದ್ಯಮ ಮಂಡಳಿ ಅಧ್ಯಕ್ಷೆ ಶಾಲೆಟ್ ಲವೀನಾ ಪಿಂಟೋ, ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಎಂ.ಪಿ. ಶ್ರೀನಾಥ್, ಕುದ್ರೋಳಿ ಕ್ಷೇತ್ರದ ಅಧ್ಯಕ್ಷ ಜಯರಾಜ್ ಹೆಚ್. ಸೋಮಸುಂದರಂ, ಹೆಚ್ಚುವರಿ ಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಮಂಗಳೂರು ತಹಶೀಲ್ದಾರ್ ರಮೇಶ್ ಬಾಬು ಮತ್ತು ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕ ಜಯರಾಮ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ. ಕಾರ್ಯಕ್ರಮಕ್ಕೆ ಸ್ವಾಗತ ಕೋರಿದರು.