ಧರ್ಮಸ್ಥಳ : ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಆಪ್ತಾಸ್ ಆಯುರ್ವೇದ ಟ್ರಸ್ಟ್‌ನ ದಶಮಾನೋತ್ಸವದ ಅಂಗವಾಗಿ ಇಂದ್ರಿಯ ಆರೋಗ್ಯದ ಕುರಿತು ಆಯೋಜಿಸಲಾದ ಅಂತಾರಾಷ್ಟ್ರೀಯ ಸಮಾವೇಶ “ಪುನರ್ವಸು” ಉದ್ಘಾಟನೆಗೊಂಡಿತು. ಕೇಂದ್ರ ಸರ್ಕಾರದ ಭಾರತೀಯ ಔಷಧ ಪದ್ಧತಿಯ ರಾಷ್ಟ್ರೀಯ ಪರಿಷತ್ ಅಧ್ಯಕ್ಷರಾದ ವೈದ್ಯ ಮನೀಷಾ ಕೋಟೆಕಾರ್ ಕಾರ್ಯಕ್ರಮ ಉದ್ಘಾಟಿಸಿ, ಸಾವಿರಾರು ವರ್ಷಗಳ ಪಾರಂಪರಿಕ ಆಯುರ್ವೇದ ಪದ್ಧತಿಯಿಂದ ಪಂಚೇಂದ್ರಿಯಗಳ ಬಲವರ್ಧನೆ ಹಾಗೂ ಉತ್ತಮ ಆರೋಗ್ಯ ಪಡೆಯಲು ಸಾಧ್ಯ ಎಂದು ತಿಳಿಸಿದರು. ಪ್ರಕೃತಿಯಿಂದ ವಿಮುಖರಾಗಿ ಪರಿಸರಕ್ಕೆ ಹಾನಿ ಮಾಡುತ್ತಿರುವುದೇ ಇಂದಿನ ರೋಗಗಳಿಗೆ ಕಾರಣವಾಗಿದ್ದು, ವೈದ್ಯರು ಆಧುನಿಕ ತಂತ್ರಜ್ಞಾನ, ಕೌಶಲ ಹಾಗೂ ಸಹಾನುಭೂತಿಯಿಂದ ರೋಗಿಗಳ ಸೇವೆ ಮಾಡಬೇಕು ಎಂದು ಅವರು ಕರೆ ನೀಡಿದರು.
ಸಮಾವೇಶದಲ್ಲಿ ಇಂದ್ರಿಯ ಆರೋಗ್ಯ ಅಭಿಯಾನದ ಲೋಗೊ ಅನಾವರಣಗೊಳಿಸಿ, “ಚೋಟಾ ಚರಕ” ಪುಸ್ತಕ ಬಿಡುಗಡೆಗೊಳಿಸಿದ ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಆಯುರ್ವೇದದ ದೈನಂದಿನ ಬಳಕೆಯಿಂದ ಆಯುಷ್ಯ ವೃದ್ಧಿಯ ಜೊತೆಗೆ ಸುಖ-ಶಾಂತಿ ನೆಮ್ಮದಿ ಪಡೆಯಬಹುದು ಎಂದರು. ಉಡುಪಿ, ಹಾಸನ ಮತ್ತು ಬೆಂಗಳೂರಿನ ಎಸ್.ಡಿ.ಎಂ. ಆಯುರ್ವೇದ ಆಸ್ಪತ್ರೆಗಳ ಮೂಲಕ ರಿಯಾಯಿತಿ ದರದಲ್ಲಿ ಗುಣಮಟ್ಟದ ಶುಶ್ರೂಷೆ ನೀಡಿ ಆಯುರ್ವೇದವನ್ನು ಜನಪ್ರಿಯಗೊಳಿಸಲಾಗುತ್ತಿದೆ ಎಂದು ಅವರು ಹೇಳಿದರು.
ಖ್ಯಾತ ವೈದ್ಯ ಡಾ. ಶರದ್‌ಕುಮಾರ್ ಎಂ. ಮಾತನಾಡಿ, ದೇಶದ ೬೦೦ ಆಯುರ್ವೇದ ಕಾಲೇಜುಗಳ ಆಶ್ರಯದಲ್ಲಿ ಮುಂದಿನ ೫ ವರ್ಷಗಳಲ್ಲಿ ಪ್ರತಿವರ್ಷ ಒಂದು ಗ್ರಾಮವನ್ನು ದತ್ತು ತೆಗೆದುಕೊಂಡು ೫೦೦ ಸ್ವಯಂ-ಸೇವಕರ ಮೂಲಕ ಆಯುರ್ವೇದ ಜಾಗೃತಿ ಮೂಡಿಸುವ ಅಭಿಯಾನಕ್ಕೆ ಧರ್ಮಸ್ಥಳದಿಂದ ಚಾಲನೆ ಸಿಕ್ಕಿದೆ ಎಂದು ಪ್ರಕಟಿಸಿದರು. ಆಯುಷ್ ಸಲಹೆಗಾರ ಡಾ. ಕೌಸ್ತುಭ ಉಪಾಧ್ಯಾಯ ಹಾಗೂ ಕರ್ನಾಟಕ ಸರ್ಕಾರದ ಆಯುಷ್ ಇಲಾಖಾ ಆಯುಕ್ತ ಡಾ. ಸುನಿಲ್ ಪನ್ವಾರ್ ಅವರು ಆಯುರ್ವೇದ ಪದ್ಧತಿಯ ಪ್ರಚಾರ ಮತ್ತು ಹೆಚ್ಚಿನ ಸಂಶೋಧನೆಗಳ ಅಗತ್ಯವನ್ನು ಪ್ರತಿಪಾದಿಸಿದರು. ಇದೇ ವೇಳೆ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ಗುರುವಂದನ' ಗೌರವ ಸಲ್ಲಿಸಲಾಯಿತು.