ಮೂಡುಬಿದಿರೆ: ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಕ್ಷೇತ್ರದಲ್ಲಿ ಯುವಜನರಿಗೆ, ಅದರಲ್ಲೂ ವಿಜ್ಞಾನ ಪದವೀಧರರಿಗೆ ಉತ್ತಮ ಉದ್ಯೋಗಾವಕಾಶಗಳಿದ್ದು, ಸ್ಥಳೀಯ ಯುವಕರು ಈ ಕ್ಷೇತ್ರವನ್ನು ವೃತ್ತಿಯಾಗಿ ಆಯ್ಕೆ ಮಾಡಿಕೊಳ್ಳಬೇಕು ಎಂದು ಮಂಗಳೂರು ವಲಯದ ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶಂಕರ್ ಎಂ. ಕರೆ ನೀಡಿದ್ದಾರೆ.
ಆಳ್ವಾಸ್ ಕಾಲೇಜಿನ ವಿಜ್ಞಾನ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ಅಗ್ನಿ ಸುರಕ್ಷತಾ ವ್ಯವಸ್ಥೆ ಹಾಗೂ ಅಗ್ನಿಶಾಮಕ ಇಲಾಖೆಯ ಕಾರ್ಯವೈಖರಿ' ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಅಗ್ನಿಶಾಮಕ ಕ್ಷೇತ್ರದಲ್ಲಿ ಅವಕಾಶಗಳು ಸಾಕಷ್ಟಿದ್ದರೂ ಸ್ಥಳೀಯ ಯುವಕರ ಭಾಗವಹಿಸುವಿಕೆ ಕಡಿಮೆಯಿದೆ. ಬಿಎಸ್ಸಿ ರಸಾಯನಶಾಸ್ತ್ರ ಪದವೀಧರರಿಗೆ ಉತ್ತಮ ವೇತನ ಹಾಗೂ ವೃತ್ತಿ ಬೆಳವಣಿಗೆಗೆ ಅವಕಾಶಗಳಿವೆ. ಸ್ಥಳೀಯ ಯುವಕರು ಇಲಾಖೆಗೆ ಸೇರ್ಪಡೆಯಾದರೆ ತಮ್ಮ ಭಾಗದ ಭೌಗೋಳಿಕ ಪರಿಸ್ಥಿತಿಯ ಅರಿವಿರುವುದರಿಂದ ತುರ್ತು ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಸೇವೆ ಸಲ್ಲಿಸಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಇಲಾಖೆಯ ಶ್ರೇಣೀಕೃತ ವ್ಯವಸ್ಥೆ, ಸಿಬ್ಬಂದಿಯ ಕರ್ತವ್ಯ ಹಾಗೂ ತುರ್ತು ಸಂದರ್ಭಗಳಲ್ಲಿ ಜನರ ಪ್ರಾಣ ಮತ್ತು ಆಸ್ತಿಪಾಸ್ತಿ ರಕ್ಷಿಸುವಲ್ಲಿ ಅಗ್ನಿಶಾಮಕ ದಳದ ಪಾತ್ರದ ಕುರಿತು ಅವರು ವಿವರಣೆ ನೀಡಿದರು. ಕಾರ್ಯಕ್ರಮದಲ್ಲಿ ಅಗ್ನಿಶಾಮಕ ಸುರಕ್ಷತಾ ಸಾಧನಗಳ ಬಳಕೆ, ಬೆಂಕಿ ನಂದಿಸುವ ವಿಧಾನಗಳು ಹಾಗೂ ಮುನ್ನೆಚ್ಚರಿಕೆ ಕ್ರಮಗಳ ಕುರಿತು ಪ್ರಾಯೋಗಿಕ ಪ್ರಾತ್ಯಕ್ಷಿಕೆಯನ್ನು ನಡೆಸಿಕೊಡಲಾಯಿತು.
ಇದೇ ವೇಳೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಶಂಕರ್ ಎಂ. ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ವಿಜ್ಞಾನ ವಿಭಾಗದ ಮುಖ್ಯಸ್ಥೆ ರಮ್ಯ ರೈ ಹಾಗೂ ಮೂಡುಬಿದಿರೆ ಅಗ್ನಿಶಾಮಕ ಸಿಬ್ಬಂದಿ ಉಪಸ್ಥಿತರಿದ್ದರು.