image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ತರಬೇತಿ ಅಗತ್ಯ: ಸಚೇತ್ ಸುವರ್ಣ

ವಿದ್ಯಾರ್ಥಿಗಳಿಗೆ ವಿಪತ್ತು ನಿರ್ವಹಣೆ ತರಬೇತಿ ಅಗತ್ಯ: ಸಚೇತ್ ಸುವರ್ಣ

ಮೂಡುಬಿದಿರೆ: ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಸಾಮಾಜಿಕ ಕಾಳಜಿ ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸುವ ಅತ್ಯುತ್ತಮ ವೇದಿಕೆಯಾಗಿದೆ ಎಂದು ದಕ್ಷಿಣ ಕನ್ನಡ ಜೂನಿಯರ್ ರೆಡ್ ಕ್ರಾಸ್ ಸಬ್ ಕಮಿಟಿ ನಿರ್ದೇಶಕ ಸಚೇತ್ ಸುವರ್ಣ ತಿಳಿಸಿದ್ದಾರೆ.

ಆಳ್ವಾಸ್ ಪದವಿಪೂರ್ವ ಕಾಲೇಜಿನ ಶಿವರಾಮ ಕಾರಂತ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಜೂನಿಯರ್ ರೆಡ್ ಕ್ರಾಸ್ ಘಟಕದ ಶೈಕ್ಷಣಿಕ ಚಟುವಟಿಕೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೆಡ್ ಕ್ರಾಸ್ ಸಂಸ್ಥೆಯ ಮೂಲ ತತ್ವಗಳ ಬಗ್ಗೆ ಮಾಹಿತಿ ನೀಡಿದ ಅವರು, ತುರ್ತು ಸಂದರ್ಭಗಳಲ್ಲಿ ಪ್ರಥಮ ಚಿಕಿತ್ಸೆ ನೀಡುವುದು, ಬೆಂಕಿ ಅವಘಡ ಹಾಗೂ ಪ್ರವಾಹದಂತಹ ವಿಪತ್ತುಗಳನ್ನು ಎದುರಿಸುವ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿದರು. ಮಡಿಕೇರಿ, ಅಸ್ಸಾಂ ಮತ್ತು ನೇಪಾಳದ ಪ್ರಕೃತಿ ವಿಕೋಪಗಳಲ್ಲಿ ರೆಡ್ ಕ್ರಾಸ್ ಸ್ವಯಂಸೇವಕರು ನಡೆಸಿದ ಪರಿಹಾರ ಕಾರ್ಯಗಳನ್ನು ಉದಾಹರಿಸಿ, ತಕ್ಷಣ ಸ್ಪಂದಿಸುವ ತರಬೇತಿ ಪಡೆದ ಸ್ವಯಂಸೇವಕರ ಅಗತ್ಯವನ್ನು ವಿವರಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಮಾತನಾಡಿ, ವಯನಾಡು ಹಾಗೂ ನೇಪಾಳದ ವಿಕೋಪಗಳ ಸಂದರ್ಭದಲ್ಲಿ ಸ್ವಯಂಸೇವಾ ಸಂಸ್ಥೆಗಳ ಪಾತ್ರ ಹಿರಿದಾಗಿದ್ದು, ಸರಿಯಾದ ಸಮಯದಲ್ಲಿ ನೀಡುವ ನೆರವು ಜೀವ ರಕ್ಷಿಸಲು ನೆರವಾಗುತ್ತದೆ ಎಂದರು. ಸಮಾರಂಭದಲ್ಲಿ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ.ಡಿ. ಉಪಸ್ಥಿತರಿದ್ದರು. ಜೂನಿಯರ್ ರೆಡ್ ಕ್ರಾಸ್ ಘಟಕದ ಸಂಯೋಜಕಿ ಪೂರ್ಣಿಮಾ ಸ್ವಾಗತಿಸಿ, ವೀಕ್ಷಾ ಕುಂದರ್ ಧನ್ಯವಾದ ಸಮರ್ಪಿಸಿದರು. ಸಪ್ತಮಿ ಕೋಟ್ಯಾನ್ ಅತಿಥಿ ಪರಿಚಯ ಮಾಡಿಕೊಟ್ಟರೆ, ರಿಯೋಲ ಕುಟಿನ್ನ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ