ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಆಯೋಜಿಸಲಾಗುವ ರಾಷ್ಟ್ರೀಯ ಮಟ್ಟದ 'ಆಳ್ವಾಸ್ ನುಡಿಸಿರಿ-ವಿರಾಸತ್' ಕಾರ್ಯಕ್ರಮವನ್ನು ವೈವಿಧ್ಯಮಯ ಹಾಗೂ ಅರ್ಥಪೂರ್ಣವಾಗಿ ರೂಪಿಸುವ ನಿಟ್ಟಿನಲ್ಲಿ ಹಂಸನಗರದ ಶೋಭಾ ಅತಿಥಿಗೃಹದಲ್ಲಿ ಎರಡನೇ ಹಂತದ ಪೂರ್ವಭಾವಿ ಸಭೆ ನಡೆಯಿತು. ಸಭೆಯಲ್ಲಿ ಕಾರ್ಯಕ್ರಮದ ಸಮಗ್ರ ರೂಪುರೇಷೆ, ವೇದಿಕೆ ಸಿದ್ಧತೆ ಹಾಗೂ ನಿರ್ವಹಣೆಯ ಕುರಿತು ಸುದೀರ್ಘ ಚರ್ಚೆ ನಡೆಸಲಾಯಿತು. ಸಾಹಿತ್ಯ, ಕಲೆ, ಸಂಸ್ಕೃತಿ, ವಿಜ್ಞಾನ, ಕೃಷಿ ಮತ್ತು ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳ ವಿಸ್ತೃತ ಪರಿಚಯವನ್ನು ಸಾಹಿತ್ಯಾಭಿಮಾನಿಗಳಿಗೆ ತಲುಪಿಸಲು ಪ್ರದರ್ಶನಗಳು, ಮೇಳಗಳು, ಗೋಷ್ಠಿಗಳು ಹಾಗೂ ಸಂವಾದಗಳನ್ನು ಆಯೋಜಿಸಲು ಸಿದ್ಧತೆ ನಡೆಸಲಾಗಿದೆ. ಹಿರಿಯ ವಿದ್ವಾಂಸರು, ಸಾಹಿತಿಗಳು ಹಾಗೂ ವಿವಿಧ ಕ್ಷೇತ್ರಗಳ ಸಾಧಕರನ್ನು ಒಂದೇ ವೇದಿಕೆಯಲ್ಲಿ ಸೇರಿಸಿ ಜ್ಞಾನ ವಿನಿಮಯಕ್ಕೆ ಅವಕಾಶ ಕಲ್ಪಿಸುವುದು ಮತ್ತು ಹೊಸ ತಲೆಮಾರಿಗೆ ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ತಲುಪಿಸುವುದು ಈ ಕಾರ್ಯಕ್ರಮದ ಮುಖ್ಯ ಆಶಯವಾಗಿದೆ.
ಈ ವೇಳೆ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ, "ನುಡಿಸಿರಿ ಮತ್ತು ವಿರಾಸತ್‌ನ್ನು ಕೇವಲ ಸಾಹಿತ್ಯ-ಸಾಂಸ್ಕೃತಿಕ ಅಭಿವ್ಯಕ್ತಿಗೆ ಸೀಮಿತಗೊಳಿಸದೆ, ಸಮಕಾಲೀನ ಸಮಾಜದ ಚಿಂತನೆಗಳು ಹಾಗೂ ಹೊಸ ತಲೆಮಾರಿನ ಆಶಯಗಳಿಗೆ ಸ್ಪಂದಿಸುವ ವೇದಿಕೆಯಾಗಿ ರೂಪಿಸಲಾಗುತ್ತಿದೆ. ವಿಶೇಷವಾಗಿ ಯುವಜನರ ಪ್ರತಿಭೆ ಮತ್ತು ಚಿಂತನೆಗಳಿಗೆ ಹೆಚ್ಚಿನ ಅವಕಾಶ ನೀಡಲಾಗುವುದು" ಎಂದು ತಿಳಿಸಿದರು. ಸಭೆಯಲ್ಲಿ ಕರ‍್ಯಕಾರಿ ಸಮಿತಿಯ ಪ್ರಮುಖರಾದ ಡಾ. ಧನಂಜಯ ಕುಂಬ್ಳೆ, ಡಾ. ಎಂ.ಪಿ. ಶ್ರೀನಾಥ್, ಡಾ. ಬಿ. ಜನಾರ್ದನ ಭಟ್, ವೇಣುಗೋಪಾಲ್ ಶೆಟ್ಟಿ ಉಪಸ್ಥಿತರಿದ್ದರು. ಕನ್ನಡ ವಿಭಾಗದ ಉಪನ್ಯಾಸಕಿ ಡಾ. ಸುಧಾರಾಣಿ ಕಾರ್ಯಕ್ರಮ ನಿರೂಪಿಸಿದರು.