ಮಂಗಳೂರು: ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಪೂರೈಕೆ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವುದು, ಗ್ರಾಹಕರಿಗೆ ತ್ವರಿತ ಹಾಗೂ ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ಹಲವು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಮೆಸ್ಕಾಂ ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ. ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿದ್ಯುತ್ ವ್ಯವಸ್ಥೆಯ ಸುರಕ್ಷತೆ ಮತ್ತು ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮೆಸ್ಕಾಂನ ವಿವಿಧ ವಿಭಾಗಗಳಲ್ಲಿ ಆಧುನಿಕ ತಾಂತ್ರಿಕ ಸಾಧನಗಳನ್ನು ಅಳವಡಿಸುವ ಮೂಲಕ ವಿದ್ಯುತ್ ದೋಷಗಳನ್ನು ತ್ವರಿತವಾಗಿ ಪತ್ತೆಹಚ್ಚಿ ಪರಿಹರಿಸುವ ಕ್ರಮ ಕೈಗೊಳ್ಳಲಾಗಿದೆ ಎಂದರು.
ಮೆಸ್ಕಾಂ ವ್ಯಾಪ್ತಿಯಲ್ಲಿ 705 ಸಂಖ್ಯೆಯ Non Contact Voltage Detectors (NCVDs) ಖರೀದಿಸಿ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿಗೆ ನೀಡಲಾಗಿದೆ. ಅಲ್ಲದೆ, ವಿದ್ಯುತ್ ಪರಿವೀಕ್ಷಣೆ ಹಾಗೂ ಪರೀಕ್ಷಾ ಕಾರ್ಯಗಳನ್ನು ಸುಗಮಗೊಳಿಸಲು Transformer Testing Benchಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ. ಕೇಬಲ್ ದೋಷಗಳನ್ನು ಪತ್ತೆಹಚ್ಚಲು Cable Fault Locator ಸಾಧನಗಳನ್ನೂ ಒದಗಿಸಲಾಗುತ್ತಿದೆ ಎಂದು ಅವರು ವಿವರಿಸಿದರು.
ವಿದ್ಯುತ್ ಕಂಬಗಳು ಹಾಗೂ ಪರಿವರ್ತಕಗಳ ನಿರ್ವಹಣೆಗೂ ವಿಶೇಷ ಗಮನ ನೀಡಲಾಗುತ್ತಿದೆ. ಮೆಸ್ಕಾಂ ವ್ಯಾಪ್ತಿಯಲ್ಲಿ 100 ಸಂಖ್ಯೆಯ ಸ್ಟ್ರೀಟ್ ಲೈಟ್‌ಗಳಿಗೆ ಸಂಬಂಧಿಸಿದ ಸ್ವಯಂಚಾಲಿತ ವ್ಯವಸ್ಥೆ ಸೇರಿದಂತೆ ವಿವಿಧ ತಾಂತ್ರಿಕ ಸುಧಾರಣೆಗಳನ್ನು ಕೈಗೊಳ್ಳಲಾಗಿದೆ. ವಿದ್ಯುತ್ ಮಾರ್ಗಗಳಲ್ಲಿ ಸುರಕ್ಷತೆ ಹೆಚ್ಚಿಸಲು ‘C Type Wedge Connector’ ಸೇರಿದಂತೆ ಅಗತ್ಯ ಪರಿಕರಗಳನ್ನು ಅಳವಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಹಕರಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಪ್ರಕ್ರಿಯೆಯನ್ನು ಮತ್ತಷ್ಟು ಸರಳಗೊಳಿಸುವ ನಿಟ್ಟಿನಲ್ಲಿ ಹೊಸ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ವಿವಿಧ ವರ್ಗಗಳ ವಿದ್ಯುತ್ ಸಂಪರ್ಕಗಳಿಗೆ ಸಂಬಂಧಿಸಿದ ಅರ್ಜಿಗಳ ವಿಲೇವಾರಿಗೂ ಆದ್ಯತೆ ನೀಡಲಾಗುತ್ತಿದೆ. ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವ ಕಾರ್ಯವೂ ಮುಂದುವರಿದಿದೆ ಎಂದರು.
ಮೆಸ್ಕಾಂ ವ್ಯಾಪ್ತಿಯಲ್ಲಿ ವಿವಿಧ ಹುದ್ದೆಗಳಿಗೆ 5,271 ಮಂದಿ ಸಿಬ್ಬಂದಿ ಮಂಜೂರಾಗಿದ್ದು, 2,535 ಹುದ್ದೆಗಳು ಭರ್ತಿಯಾಗಿವೆ. 2,736 ಹುದ್ದೆಗಳು ಖಾಲಿ ಇವೆ. ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಸೇರಿದಂತೆ ವಿವಿಧ ತಾಂತ್ರಿಕ ಹುದ್ದೆಗಳ ಖಾಲಿ ಸ್ಥಾನಗಳನ್ನು ಭರ್ತಿ ಮಾಡುವ ಅಗತ್ಯವಿದೆ ಎಂದು ಹರೀಶ್ ಕುಮಾರ್ ಹೇಳಿದರು.
ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ನೀರು ಸರಬರಾಜು ಮತ್ತು ಬೀದಿ ದೀಪಗಳ ವ್ಯವಸ್ಥೆ ಸುಧಾರಣೆಗೆ ವಿಶೇಷ ಅನುದಾನ ಒದಗಿಸಲಾಗುತ್ತಿದೆ. ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ₹298.19 ಕೋಟಿ, ಟಿಎಂಸಿ/ಸಿಎಂಸಿ ವ್ಯಾಪ್ತಿಗೆ ₹7 ಕೋಟಿ ಸೇರಿದಂತೆ ಒಟ್ಟು ₹305.84 ಕೋಟಿ ಮೊತ್ತದ ಕಾಮಗಾರಿಗಳಿಗೆ ಸಂಬಂಧಿಸಿದ ಯೋಜನೆ ರೂಪಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಮೆಸ್ಕಾಂ ಖಾಸಗೀಕರಣ ಆಗುವುದೇ ಎಂದು ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಮೆಸ್ಕಾಂ ವ್ಯಾಪ್ತಿಯಲ್ಲಿ ವಿದ್ಯುತ್ ಜಾಲದ ವಿಸ್ತರಣೆಯೂ ನಡೆಯುತ್ತಿದ್ದು, 33 ಕೆ.ವಿ., 11 ಕೆ.ವಿ. ಹಾಗೂ ಎಲ್‌ಟಿ ಮಾರ್ಗಗಳ ಒಟ್ಟು ವ್ಯಾಪ್ತಿ 97,284.39 ಕಿ.ಮೀ. ಇದೆ. ವಿದ್ಯುತ್ ಮೂಲಸೌಕರ್ಯವನ್ನು ಬಲಪಡಿಸುವ ಮೂಲಕ ಗ್ರಾಹಕರಿಗೆ ನಿರಂತರ ಮತ್ತು ಗುಣಮಟ್ಟದ ವಿದ್ಯುತ್ ಸೇವೆ ನೀಡುವುದು ಮೆಸ್ಕಾಂನ ಪ್ರಮುಖ ಗುರಿಯಾಗಿದೆ ಎಂದು ಅಧ್ಯಕ್ಷ ಹರೀಶ್ ಕುಮಾರ್ ತಿಳಿಸಿದರು.
ಅಲ್ಲದೆ, ಪ್ರಧಾನಮಂತ್ರಿ ಕುಸುಮ್-ಬಿ ಯೋಜನೆಯಡಿ 2,572 ಸಂಖ್ಯೆಯ ಸೋಲಾರ್ ಪಂಪ್‌ಸೆಟ್‌ಗಳನ್ನು ಅಳವಡಿಸುವ ಗುರಿಯಿದ್ದು, ಗಂಗಾ ಕಲ್ಯಾಣ ಯೋಜನೆಯಡಿ 1,514 ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಕಾರ್ಯವೂ ನಡೆಯುತ್ತಿದೆ ಎಂದು ಅವರು ಹೇಳಿದರು.