ಮಂಗಳೂರು: ರಾಷ್ಟ್ರೀಯ ಹೆದ್ದಾರಿ-66ರ ವಿಸ್ತರಣೆಯ ಹಿನ್ನೆಲೆಯಲ್ಲಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರವೇಶ ದ್ವಾರವನ್ನು ಸುರಕ್ಷಿತವಾಗಿ ಸ್ಥಳಾಂತರಿಸುತ್ತಿರುವ ಮಹತ್ವದ ಕಾಮಗಾರಿ ಸ್ಥಳಕ್ಕೆ ಎ.ಜೆ. ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಅಂತಿಮ ವರ್ಷದ ವಿದ್ಯಾರ್ಥಿಗಳು ಭೇಟಿ ನೀಡಿ ತಾಂತ್ರಿಕ ಮಾಹಿತಿ ಪಡೆದಿದ್ದಾರೆ.
ಅಸೋಸಿಯೇಟ್ ಪ್ರೊಫೆಸರ್ ವಿನೋದ್ ಟಿ. ಡಿಸೋಜಾ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ ದೀಕ್ಷಾ ಆನಂದ್ ನೇತೃತ್ವದಲ್ಲಿ ಸುಮಾರು 15 ವಿದ್ಯಾರ್ಥಿಗಳು ಈ ಅಧ್ಯಯನ ಪ್ರವಾಸದಲ್ಲಿ ಭಾಗವಹಿಸಿದ್ದರು. ಯೋಜನೆಯ ತಾಂತ್ರಿಕ ಮಾರ್ಗದರ್ಶಕ ಎಂಜಿನಿಯರ್ ಮುಲ್ಕಿ ಜೀವನ್ ಕೆ. ಶೆಟ್ಟಿ ಅವರು ವಿದ್ಯಾರ್ಥಿಗಳಿಗೆ ದ್ವಾರದ ಐತಿಹಾಸಿಕ ಹಾಗೂ ತಾಂತ್ರಿಕ ಮಹತ್ವದ ಕುರಿತು ವಿವರಣೆ ನೀಡಿದರು.
ನೈಜ ಕಾಮಗಾರಿ ಸ್ಥಳದಲ್ಲಿ ಎಂಜಿನಿಯರಿಂಗ್ ತತ್ವಗಳನ್ನು ಪ್ರಾಯೋಗಿಕವಾಗಿ ಅರ್ಥಮಾಡಿಕೊಳ್ಳಲು ಇಂತಹ ತಾಂತ್ರಿಕ ಭೇಟಿಗಳು ವಿದ್ಯಾರ್ಥಿಗಳಿಗೆ ಅತ್ಯಂತ ಉಪಯುಕ್ತವಾಗಿವೆ ಎಂದು ಬೋಧಕ ಸಿಬ್ಬಂದಿ ಅಭಿಪ್ರಾಯಪಟ್ಟಿದ್ದಾರೆ. ವಿದ್ಯಾರ್ಥಿಗಳು ಸ್ಥಳದಲ್ಲೇ ಜ್ಯಾಕ್ ವ್ಯವಸ್ಥೆ ಹಾಗೂ ಅಡಿಭಾಗದ ಬೆಂಬಲ ವಿಧಾನಗಳನ್ನು ನೇರವಾಗಿ ವೀಕ್ಷಿಸಿ ತಮ್ಮ ಸಂಶಯಗಳನ್ನು ಪರಿಹರಿಸಿಕೊಂಡರು.