ಉಜಿರೆ : ಕಲಾ ಕೌಶಲ್ಯವನ್ನು ಕೇವಲ ಹವ್ಯಾಸವಾಗಿ ಉಳಿಸಿಕೊಳ್ಳದೆ, ಅದನ್ನು ಸ್ವಉದ್ಯೋಗ ಹಾಗೂ ಉದ್ಯಮವಾಗಿ ಪರಿವರ್ತಿಸಿಕೊಂಡಾಗ ಆರ್ಥಿಕ ಸ್ವಾವಲಂಬನೆ ಸಾಧ್ಯ ಎಂದು ಧರ್ಮಸ್ಥಳ ಎಸ್.ಡಿ.ಎಮ್. ಇಂಗ್ಲಿಷ್ ಮೀಡಿಯಂ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಪರಿಮಳ ಅಭಿಪ್ರಾಯಪಟ್ಟಿದ್ದಾರೆ.
ಉಜಿರೆಯ ಸಿದ್ಧವನದಲ್ಲಿರುವ ರುಡ್‌ಸೆಟ್ ಸಂಸ್ಥೆಯಲ್ಲಿ ಜುಲೈ 28ರಿಂದ ಆಗಸ್ಟ್ 27ರವರೆಗೆ ನಡೆದ 'ವಸ್ತ್ರಚಿತ್ರ ಕಲಾ ಲಘು ಉದ್ಯಮಿ' ತರಬೇತಿಯ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಶಿಬಿರಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಅವರು ಮಾತನಾಡಿದರು. ಇಂದಿನ ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ಕೌಶಲ್ಯಕ್ಕೆ ಹೆಚ್ಚಿನ ಮಹತ್ವವಿದ್ದು, ತರಬೇತಿಯಲ್ಲಿ ಕಲಿತ ಕಲೆಯನ್ನು ಸೃಜನಶೀಲತೆಯೊಂದಿಗೆ ಬಳಸಿ, ಮಾರುಕಟ್ಟೆಯ ಬೇಡಿಕೆಗೆ ಅನುಗುಣವಾಗಿ ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ತಯಾರಿಸುವ ಮೂಲಕ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರುಡ್‌ಸೆಟ್ ಸಂಸ್ಥೆಗಳ ಕೇಂದ್ರ ಕಚೇರಿಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಬಿ.ಪಿ. ವಿಜಯ ಕುಮಾರ್ ಮಾತನಾಡಿ, ಪಡೆದ ಕೌಶಲ್ಯವನ್ನು ಉದ್ಯಮವಾಗಿ ರೂಪಿಸಿಕೊಂಡು ಸ್ವಉದ್ಯೋಗದ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದರು. ಇದರೊಂದಿಗೆ ಗುಣಮಟ್ಟ, ಹೊಸತನ, ಗ್ರಾಹಕ ಸೇವೆ ಹಾಗೂ ಮಾರುಕಟ್ಟೆ ಜ್ಞಾನ ಬೆಳೆಸಿಕೊಳ್ಳುವುದು ಅತ್ಯಗತ್ಯ ಎಂದು ತಿಳಿಸಿದರು.
ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಶ್ರೀ ಸುನಿಲ್ ಜಿ. ನಾಯಕ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ತರಬೇತಿಯ ಉದ್ದೇಶ ಹಾಗೂ ನಂತರ ದೊರೆಯಬಹುದಾದ ಸ್ವಉದ್ಯೋಗದ ಅವಕಾಶಗಳನ್ನು ವಿವರಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಅಬ್ರಹಾಂ ಜೇಮ್ಸ್ ಧನ್ಯವಾದ ಅರ್ಪಿಸಿದರು. ಹಿರಿಯ ಉಪನ್ಯಾಸಕರಾದ ಶ್ರೀ ಕರುಣಾಕರ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಕುಮಾರಿ ವೀಕ್ಷಾ ಮತ್ತು ಬಳಗ ಪ್ರಾರ್ಥಿಸಿದರು. ಶಿಬಿರಾರ್ಥಿಗಳಾದ ಕುಮಾರಿ ಕವನ ಹಾಗೂ ಕುಮಾರಿ ಅನ್ವಿತಾ ತಮ್ಮ ಅನುಭವ ಹಂಚಿಕೊಂಡು, ತರಬೇತಿಯು ಸ್ವಉದ್ಯೋಗ ಆರಂಭಿಸಲು ಆತ್ಮವಿಶ್ವಾಸ ಮೂಡಿಸಿದೆ ಎಂದು ತಿಳಿಸಿದರು. ರುಡ್‌ಸೆಟ್ ಸಂಸ್ಥೆಯ 999ನೇ ಬ್ಯಾಚ್ ಆಗಿ ನಡೆದ ಈ ತರಬೇತಿಯು ಶಿಬಿರಾರ್ಥಿಗಳಲ್ಲಿ ಉದ್ಯಮಶೀಲತೆಯ ಮನೋಭಾವ ಬೆಳೆಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.