ಮಂಗಳೂರು: ಶ್ರೀಕ್ಷೇತ್ರ ಕುದ್ರೋಳಿಯಲ್ಲಿ ಬ್ರಹ್ಮಶ್ರೀ ನಾರಾಯಣಗುರು ಸ್ವಾಮೀಜಿಯವರ 172ನೇ ಜನ್ಮದಿನಾಚರಣೆಯ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಭವ್ಯ ಗುರುಪೂಜೆ ನೆರವೇರಿತು. ಬೆಳಿಗ್ಗೆ 8.45ಕ್ಕೆ ಸಾಮೂಹಿಕ ಗುರು ಪ್ರಾರ್ಥನೆ ಹಾಗೂ ಗುರುಪೂಜೆಯೊಂದಿಗೆ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡವು. ಮಧ್ಯಾಹ್ನ ಮಹಾಪೂಜೆ ನಡೆಯಲಿದ್ದು, ರಾತ್ರಿ ಮಹಾಗುರುಪೂಜೆ ಹಾಗೂ ಭಕ್ತರಿಗೆ ಪ್ರಸಾದ ವಿತರಣೆ ಜರುಗಿತು. ಸಂಜೆ 6 ಗಂಟೆಗೆ ಶ್ರೀ ವೆಂಕಟೇಶ ಶಿವಭಕ್ತಿ ಯೋಗ ಸಂಘದ ಆಶ್ರಯದಲ್ಲಿ ಗಾಂಧಿನಗರದ ಶ್ರೀ ಗೋಕರ್ಣನಾಥೇಶ್ವರ ಕಾಲೇಜಿನಿಂದ ಶ್ರೀ ಗುರುವರ್ಯರ ಭಾವಚಿತ್ರದ ಮೆರವಣಿಗೆ ಶ್ರದ್ಧಾಭಕ್ತಿಗಳಿಂದ ನಡೆಯಿತು. ಈ ಸಂಭ್ರಮದ ಗುರುಪೂಜಾ ಮಹೋತ್ಸವದಲ್ಲಿ ಸಹಸ್ರಾರು ಸಂಖ್ಯೆಯ ಭಕ್ತಾದಿಗಳು ಭಾಗವಹಿಸಿ ಗುರುಗಳ ಆಶೀರ್ವಾದ ಪಡೆದರು.
ಕಾರ್ಯಕ್ರಮದಲ್ಲಿ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷ ಜೈರಾಜ್ ಎಚ್. ಸೋಮಸುಂದರಂ, ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ, ಟ್ರಸ್ಟಿಗಳಾದ ಸಂತೋಷ್ ಜೆ. ಪೂಜಾರಿ, ಸಾಯಿರಾಮ್ ಎಚ್. ಎಸ್., ಕಿಶೋರ್ ದಂಡೆಕೇರಿ, ಕೃತೀನ್ ಧೀರಜ್ ಅಮೀನ್, ಜಗದೀಪ್ ಸುವರ್ಣ, ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಡಾ. ಬಿ. ಜಿ. ಸುವರ್ಣ ಹಾಗೂ ಸಮಿತಿಯ ಸದಸ್ಯರಾದ ಪಿ. ಕೆ. ಗೌರವಿ ರಾಜಶೇಖರ್, ಲತೀಶ್ ಸುವರ್ಣ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.