ಉಜಿರೆ: ಬೆಂಗಳೂರಿನ ನ್ಯಾಷನಲ್ ಅಕಾಡೆಮಿ ಆಫ್ ರುಡ್‌ಸೆಟಿ ವತಿಯಿಂದ ಆಯೋಜಿಸಲಾಗಿರುವ 156ನೇ ತಂಡದ ತರಬೇತುದಾರರ ಉದ್ಯಮಶೀಲತಾ ಅಭಿವೃದ್ಧಿ ತರಬೇತಿ ಕಾರ್ಯಕ್ರಮದ ಪ್ರತಿನಿಧಿಗಳು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳು ಹಾಗೂ ರುಡ್‌ಸೆಟ್ ಸಂಸ್ಥೆಗಳ ಅಧ್ಯಕ್ಷರಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಆಗಸ್ಟ್ 17ರಿಂದ 29ರವರೆಗೆ ನಡೆಯುತ್ತಿರುವ ಈ ವಿಶೇಷ ತರಬೇತಿ ಕಾರ್ಯಕ್ರಮದಲ್ಲಿ ಕರ್ನಾಟಕ, ಅರುಣಾಚಲ ಪ್ರದೇಶ, ಅಸ್ಸಾಂ, ಛತ್ತೀಸ್‌ಗಢ, ಗುಜರಾತ್, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್, ಕೇರಳ, ಮಧ್ಯಪ್ರದೇಶ, ಒಡಿಶಾ, ಪಂಜಾಬ್, ರಾಜಸ್ಥಾನ, ತಮಿಳುನಾಡು, ಉತ್ತರ ಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿದಂತೆ ದೇಶದ 16 ರಾಜ್ಯಗಳ 38 ನಿರ್ದೇಶಕರು/ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದಾರೆ.
ಈ ತರಬೇತಿ ತಂಡದಲ್ಲಿ ಬ್ಯಾಂಕ್ ಆಫ್ ಇಂಡಿಯಾ (9), ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (9), ಯುಕೋ ಬ್ಯಾಂಕ್ (9), ಬ್ಯಾಂಕ್ ಆಫ್ ಬರೋಡಾ (4), ಇಂಡಿಯನ್ ಓವರ್‌ಸೀಸ್ ಬ್ಯಾಂಕ್ (3), ಜಮ್ಮು ಮತ್ತು ಕಾಶ್ಮೀರ ಬ್ಯಾಂಕ್ (2), ಅರುಣಾಚಲ ಪ್ರದೇಶ ಗ್ರಾಮೀಣ ಬ್ಯಾಂಕ್ (1) ಹಾಗೂ ಪಂಜಾಬ್ & ಸಿಂಧ್ ಬ್ಯಾಂಕ್ (1) ಸೇರಿದಂತೆ ವಿವಿಧ ಬ್ಯಾಂಕ್‌ಗಳ ಪ್ರತಿನಿಧಿಗಳು ಸೇರಿದ್ದಾರೆ. ಶೈಕ್ಷಣಿಕವಾಗಿ 23 ಪದವೀಧರರು ಹಾಗೂ 15 ಸ್ನಾತಕೋತ್ತರ ಪದವೀಧರರನ್ನು ಒಳಗೊಂಡಿರುವ ಈ ತಂಡಕ್ಕೆ ಗ್ರಾಮೀಣ ಯುವಜನರಲ್ಲಿ ಸ್ವಉದ್ಯೋಗ ಮತ್ತು ಉದ್ಯಮಶೀಲತೆಯ ಮನೋಭಾವ ಬೆಳೆಸುವ ಕುರಿತು ತರಬೇತಿ ನೀಡಲಾಗುತ್ತಿದೆ.
ಧರ್ಮಸ್ಥಳ ಭೇಟಿಯ ಸಂದರ್ಭದಲ್ಲಿ ತರಬೇತುದಾರರು ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಂದ ರುಡ್‌ಸೆಟ್ ಸಂಸ್ಥೆಗಳ ಮುಂದಿನ ಕಾರ್ಯಚಟುವಟಿಕೆಗಳು ಹಾಗೂ ಗ್ರಾಮೀಣ ಯುವಜನರಿಗೆ ತರಬೇತಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತಲುಪಿಸುವ ಕುರಿತು ಮಾರ್ಗದರ್ಶನ ಪಡೆದರು. ಈ ವೇಳೆಯಲ್ಲಿ ರುಡ್‌ಸೆಟ್ ಸಂಸ್ಥೆಗಳ ಕಾರ್ಯನಿರ್ವಾಹಕ ನಿರ್ದೇಶಕರಾದ ಬಿ.ಪಿ. ವಿಜಯ ಕುಮಾರ್, ಹಿರಿಯ ಉಪನ್ಯಾಸಕರಾದ ಅಬ್ರಹಾಂ ಜೇಮ್ಸ್, ಸುರೇಶ್ ಗೌಡ, ರಾಷ್ಟ್ರೀಯ ರುಡ್‌ಸೆಟಿ ಅಕಾಡೆಮಿಯ ಯೋಜನಾ ನಿರ್ದೇಶಕರಾದ ಶ್ರೀಕಾಂತ ಹಾಗೂ ಕಾರ್ಯಕ್ರಮದ ಸಂಯೋಜಕರು ಉಪಸ್ಥಿತರಿದ್ದರು.