image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಐ ಯುಗದಲ್ಲೂ ಚಿಂತನೆಗೆ ಓದು ಅನಿವಾರ್ಯ: ಡಾ. ರಜತಾ ಶೆಟ್ಟಿ

ಎಐ ಯುಗದಲ್ಲೂ ಚಿಂತನೆಗೆ ಓದು ಅನಿವಾರ್ಯ: ಡಾ. ರಜತಾ ಶೆಟ್ಟಿ

ಮೂಡುಬಿದಿರೆ: ಕೃತಕ ಬುದ್ಧಿಮತ್ತೆಯ (ಎಐ) ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಉತ್ತರಗಳನ್ನು ಪಡೆದುಕೊಳ್ಳುವವರಾಗದೆ, ಸ್ವತಂತ್ರವಾಗಿ ಯೋಚಿಸುವ ಹಾಗೂ ಪ್ರಶ್ನಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಎಸ್‌ಡಿಎಮ್ ಇಂಜಿನಿಯರಿಂಗ್ ಕಾಲೇಜಿನ ಮುಖ್ಯ ಗ್ರಂಥಾಪಾಲಕಿ ಡಾ. ರಜತಾ ಪಿ. ಶೆಟ್ಟಿ ಹೇಳಿದರು. ಮೂಡುಬಿದಿರೆಯ ಆಳ್ವಾಸ್ ಪದವಿ ಕಾಲೇಜಿನ ಗ್ರಂಥಾಲಯ ವಿಭಾಗದ ವತಿಯಿಂದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ 'ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ'ಯ ಅಂಗವಾಗಿ 'ಗೂಗಲ್–ಎಐ ಯುಗದಲ್ಲೂ ಓದಿನ ಅನಿವಾರ್ಯತೆ' ಕುರಿತು ಅವರು ವಿಶೇಷ ಉಪನ್ಯಾಸ ನೀಡಿದರು.

ಗೂಗಲ್ ಹಾಗೂ ಎಐ ತಂತ್ರಜ್ಞಾನದಿಂದ ಕ್ಷಣಾರ್ಧದಲ್ಲಿ ಮಾಹಿತಿ ದೊರೆಯಬಹುದು, ಆದರೆ ಅದರ ಅರ್ಥ, ಸಂದರ್ಭ ಮತ್ತು ಸತ್ಯಾಸತ್ಯತೆಯನ್ನು ನಿರ್ಣಯಿಸುವ ವಿವೇಚನಾಶಕ್ತಿ ಓದಿನಿಂದಷ್ಟೇ ಸಾಧ್ಯವಾಗುತ್ತದೆ. ಓದು ಗಮನ, ಏಕಾಗ್ರತೆ, ಕಲ್ಪನಾಶಕ್ತಿ ಹಾಗೂ ಸಂವಹನ ಕೌಶಲಗಳನ್ನು ಬೆಳೆಸುವ ಮೂಲಕ ವ್ಯಕ್ತಿಯ ಚಿಂತನಾ ಸಾಮರ್ಥ್ಯವನ್ನು ಗಟ್ಟಿಗೊಳಿಸುತ್ತದೆ. ಕೃತಕ ಬುದ್ಧಿಮತ್ತೆಯನ್ನು ಶತ್ರುವೆಂದು ಭಾವಿಸದೆ ಕಲಿಕೆಯ ಸಹಭಾಗಿಯಾಗಿ ಬಳಸಿಕೊಳ್ಳಬೇಕು. ಎಐಗೆ ಗುಲಾಮರಾಗದೆ ಅದನ್ನು ಕರಗತ ಮಾಡಿಕೊಳ್ಳಬೇಕು. ಪ್ರತಿದಿನ ಕನಿಷ್ಠ 20 ನಿಮಿಷಗಳ ಕಾಲ ಓದುವ ಅಭ್ಯಾಸವನ್ನು ಸ್ಪರ್ಧೆಯಾಗಿ ನೋಡದೆ, ಅದನ್ನೊಂದು ನಿರಂತರ ಜೀವನಶೈಲಿಯನ್ನಾಗಿ ಬೆಳೆಸಿಕೊಳ್ಳಬೇಕು ಎಂದು ಅವರು ಕಿವಿಮಾತು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಸವಲತ್ತುಗಳು ನಮ್ಮ ಕೈಯಲ್ಲಿರುವಾಗಲೇ ಅವುಗಳ ಮೌಲ್ಯವನ್ನು ಅರಿತು ಜವಾಬ್ದಾರಿಯಿಂದ ಬಳಸಿಕೊಳ್ಳಬೇಕು. ಜೀವನದಲ್ಲಿ ಯಶಸ್ಸು ಸಾಧಿಸಲು ಅವಕಾಶಗಳ ಜೊತೆಗೆ ಅಪಾಯಗಳನ್ನು ಎದುರಿಸುವ ಧೈರ್ಯ, ಕಠಿಣ ಪರಿಶ್ರಮ ಮತ್ತು ನಿರಂತರ ಕಲಿವಿನ ಮನೋಭಾವ ಅಗತ್ಯ ಎಂದರು. ಇದೇ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾಲೇಜಿನ ಮುಖ್ಯ ಗ್ರಂಥಪಾಲಕಿ ಶ್ಯಾಮಲತಾ ಪ್ರಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಅನೀಷಾ ಡಿಸೋಜಾ ನಿರೂಪಿಸಿ, ದೀಕ್ಷಿತ್ ಅತಿಥಿ ಪರಿಚಯಿಸಿ, ಅನ್ಫಲ್ ವಂದಿಸಿದರು.

Category
ಕರಾವಳಿ ತರಂಗಿಣಿ