ಉಜಿರೆ : ಉಜಿರೆಯ ಎಸ್.ಡಿ.ಎಂ. ಪ್ರೌಢಶಾಲೆಯ 2006ರ ಎಸ್.ಎಸ್.ಎಲ್.ಸಿ. ಹತ್ತನೇ ತರಗತಿಯ 'ಸಿ' ವಿಭಾಗದ ಹಳೆಯ ವಿದ್ಯಾರ್ಥಿಗಳು 20 ವರ್ಷಗಳ ಬಳಿಕ ಸಂಘಟಿತರಾಗಿ ತಮ್ಮ ಶಾಲೆಯಲ್ಲಿ ವಿಶಿಷ್ಟ ಹಾಗೂ ಅಭೂತಪೂರ್ವ "ಸ್ನೇಹ ಸಮ್ಮಿಲನ-ಗುರುನಮನ" ಕಾರ್ಯಕ್ರಮವನ್ನು ಅತ್ಯಂತ ಶಿಸ್ತುಬದ್ಧವಾಗಿ ಆಯೋಜಿಸಿದರು.
ಮಡಂತ್ಯಾರ್ ಸೇಕ್ರೆಡ್‌ಹಾರ್ಟ್ ಕಾಲೇಜಿನ ಉಪನ್ಯಾಸಕ ಹಾಗೂ ಶಾಲೆಯ ಹಿರಿಯ ವಿದ್ಯಾರ್ಥಿ ನೆಲ್ಸನ್ ಮೋನಿಸ್ ಅವರ ನೇತೃತ್ವದಲ್ಲಿ ಶಿವಪ್ರಸಾದ್ ಸುರ್ಯ, ಪ್ರಸಾದ್, ಜಲೀಲ್, ಸಹನಾ ಸೇರಿದಂತೆ 53 ಮಂದಿ ಸಹಪಾಠಿಗಳು ಹಲವು ಸುತ್ತಿನ ಸಮಾಲೋಚನೆ ನಡೆಸಿ ಈ ಕಾರ್ಯಕ್ರಮವನ್ನು ರೂಪಿಸಿದರು. ಶಾಲೆಯ ಎಲ್ಲಾ ಅಧ್ಯಾಪಕರ ಮನೆಗೆ ತೆರಳಿ ವೈಯಕ್ತಿಕವಾಗಿ ಆಹ್ವಾನಿಸಿದ ವಿದ್ಯಾರ್ಥಿಗಳು, ಅವರ ಸಮಗ್ರ ಮಾಹಿತಿ ಹಾಗೂ ಭಾವಚಿತ್ರಗಳನ್ನು ಕಲೆಹಾಕಿ ಆಕರ್ಷಕ ವೇದಿಕೆಯನ್ನು ಸಜ್ಜುಗೊಳಿಸಿದ್ದರು.
ಸಮಾರಂಭದ ದಿನದಂದು ಶಿಕ್ಷಕರನ್ನು ಆರತಿ ಬೆಳಗಿ, ಪಾದಮುಟ್ಟಿ ನಮಸ್ಕರಿಸಿ, ಗುಲಾಬಿ ಹೂ ನೀಡಿ ಚೆಂಡೆಮೇಳದ ಭವ್ಯ ಮೆರವಣಿಗೆಯೊಂದಿಗೆ ಸಭಾಭವನಕ್ಕೆ ಕರೆತರಲಾಯಿತು. ಅಂದಿನ ತರಗತಿ ಅಧ್ಯಾಪಕರಾಗಿದ್ದ ನಿವೃತ್ತ ಮುಖ್ಯಶಿಕ್ಷಕ ಸುರೇಶ್ ಕೆ. ಅವರು ಅಂದಿನ ಹಾಜರಿ ಪುಸ್ತಕವನ್ನು ತಂದು ಹಾಜರಿ ಕರೆದು ವಿದ್ಯಾರ್ಥಿಗಳ ಯೋಗಕ್ಷೇಮ ವಿಚಾರಿಸಿದ್ದು ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿತ್ತು.
ಸಭಾ ಕಾರ್ಯಕ್ರಮದಲ್ಲಿ 18 ಮಂದಿ ಶಿಕ್ಷಕರು ಹಾಗೂ 5 ಮಂದಿ ಬೋಧಕೇತರ ಸಿಬ್ಬಂದಿಗೆ ಶಾಲು, ಸ್ಮರಣಿಕೆ, ಮಾಲೆ, ಹಣ್ಣು-ಹಂಪಲು, ಪೆನ್ನು ಹಾಗೂ ಕೀ ಚೈನ್ ನೀಡಿ ಗೌರವಪೂರ್ವಕವಾಗಿ "ಗುರುವಂದನೆ" ಸಲ್ಲಿಸಲಾಯಿತು. ಬೆಳಗ್ಗಿನ ಉಪಾಹಾರ, ಮಧ್ಯಾಹ್ನದ ಭೂರಿ ಭೋಜನ ಹಾಗೂ ಮನೋರಂಜನಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆದವು.
ಸಮಾರಂಭದಲ್ಲಿ ಭಾಗವಹಿಸಿದ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳ ಶೈಕ್ಷಣಿಕ ಸಂಯೋಜಕ ಪ್ರೊ. ಎಸ್.ಎನ್. ಕಾಕತ್ಕರ್ ಮಾತನಾಡಿ, "ರಾಜ್ಯಮಟ್ಟದ ಕಾರ್ಯಕ್ರಮಕ್ಕೂ ಮಿಗಿಲಾಗಿ ಆಕರ್ಷಕ ವೇದಿಕೆ ಹಾಗೂ ಶಿಸ್ತಿನ ಸಮಯಪಾಲನೆಯೊಂದಿಗೆ ಸಮಾರಂಭ ಆಯೋಜಿಸಿದ್ದೀರಿ" ಎಂದು ವಿದ್ಯಾರ್ಥಿಗಳನ್ನು ಶ್ಲಾಘಿಸಿದರು. ಶಾಲೆಯ ಮುಖ್ಯೋಪಾಧ್ಯಾಯಿನಿ ವಿದ್ಯಾಕಿರಣ್ ಕಾರ್ಯಕ್ರಮಕ್ಕೆ ಪೂರ್ಣ ಸಹಕಾರ ನೀಡಿ ಶುಭಾಶಂಸನೆ ಮಾಡಿದರು. ಕಾರ್ಯಕ್ರಮದಲ್ಲಿ ಶಿವಪ್ರಸಾದ್ ಸುರ್ಯ ಸ್ವಾಗತಿಸಿದರು, ಸ್ವಾತಿ ಧನ್ಯವಾದ ಅರ್ಪಿಸಿದರು ಹಾಗೂ ನೆಲ್ಸನ್ ಮೋನಿಸ್ ಕಾರ್ಯಕ್ರಮ ನಿರೂಪಿಸಿದರು.