image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆಳ್ವಾಸ್‌ನಲ್ಲಿ ‘ಊರ್ಮಿಳಾ’ ಏಕವ್ಯಕ್ತಿ ರಂಗಪ್ರಯೋಗ: ವಿದುಷಿ ಅಯನಾ ಅಭಿನಯಕ್ಕೆ ಮೆಚ್ಚುಗೆ

ಆಳ್ವಾಸ್‌ನಲ್ಲಿ ‘ಊರ್ಮಿಳಾ’ ಏಕವ್ಯಕ್ತಿ ರಂಗಪ್ರಯೋಗ: ವಿದುಷಿ ಅಯನಾ ಅಭಿನಯಕ್ಕೆ ಮೆಚ್ಚುಗೆ

ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್‌ನ ಶಿವರಾಮ ಕಾರಂತ ವೇದಿಕೆಯಲ್ಲಿ ಬುಧವಾರ ‘ಅಯನಾ ಪ್ರೆಸೆಂಟ್ಸ್ – ಊರ್ಮಿಳಾ’ ಏಕವ್ಯಕ್ತಿ ರಂಗಪ್ರಯೋಗ ಯಶಸ್ವಿಯಾಗಿ ನೆರವೇರಿತು. ರಾಮಾಯಣದ ಅಲಕ್ಷಿತ ಪಾತ್ರವಾದ ಊರ್ಮಿಳೆಯ ನೋವು, ತ್ಯಾಗ ಹಾಗೂ ಆಂತರಿಕ ಸಂಘರ್ಷಗಳನ್ನು ನಾಟಕವು ಅತ್ಯಂತ ಪರಿಣಾಮಕಾರಿಯಾಗಿ ಪ್ರೇಕ್ಷಕರ ಎದುರು ಅನಾವರಣಗೊಳಿಸಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ವಿದುಷಿ ಅಯನಾ ವಿ. ರಮಣ್ ತಮ್ಮ ಅಭಿನಯ, ಧ್ವನಿ ಹಾಗೂ ದೇಹಭಾಷೆಯ ಮೂಲಕ ಊರ್ಮಿಳಾ, ಲಕ್ಷ್ಮಣ, ಶ್ರುತಕೀರ್ತಿ ಹಾಗೂ ಕೈಕೇಯಿ ಪಾತ್ರಗಳನ್ನು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ ಎಂದು ಪ್ರಶಂಸಿಸಿದರು. ಮಹಾಕಾವ್ಯಗಳಲ್ಲಿನ ಅಲಕ್ಷಿತ ಪಾತ್ರಗಳ ಒಳಮನಸ್ಸನ್ನು ಗ್ರಹಿಸುವ ಅಗತ್ಯವಿದೆ ಎಂದು ಅವರು ಪ್ರತಿಪಾದಿಸಿದರು.

ಡಾ. ಎಚ್. ಎಸ್. ವೆಂಕಟೇಶಮೂರ್ತಿ ಅವರ ರಚನೆಯ ಈ ನಾಟಕವನ್ನು ಡಾ. ಶ್ರೀಪಾದ ಭಟ್ ವಿನ್ಯಾಸಗೊಳಿಸಿ ನಿರ್ದೇಶಿಸಿದ್ದರು. ಪೌರಾಣಿಕ ಕಥನಗಳಲ್ಲಿನ ಆಂತರಿಕ ಸಂಘರ್ಷಗಳನ್ನು ಗ್ರಹಿಸಿ, ಸಮಾಜಕ್ಕೆ ಹೊಸ ದೃಷ್ಟಿಕೋನ ಹಾಗೂ ವಿವೇಕ ಮೂಡಿಸುವುದೇ ಕಲೆಯ ಮುಖ್ಯ ಉದ್ದೇಶ ಎಂದು ನಿರ್ದೇಶಕ ಡಾ. ಶ್ರೀಪಾದ ಭಟ್ ತಿಳಿಸಿದರು. ಪ್ರದರ್ಶನದ ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ನಿರ್ದೇಶಕ ಡಾ. ಶ್ರೀಪಾದ ಭಟ್ ಹಾಗೂ ಅಭಿನೇತ್ರಿ ವಿದುಷಿ ಅಯನಾ ರಮಣ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಆಳ್ವಾಸ್ ಸಂಸ್ಥೆಯ ಪ್ರಮುಖರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ