ಮಂಗಳೂರು: ತಳಮಟ್ಟದಲ್ಲಿರುವ ಬಂಟ ಸಮುದಾಯದವರನ್ನು ಮೇಲಕ್ಕೆತ್ತುವ ಪ್ರಯತ್ನಗಳು ನಿರಂತರವಾಗಿ ನಡೆಯಬೇಕಿದ್ದು, ಪ್ರತಿಯೊಬ್ಬ ಬಂಟರೂ ಛಲದಿಂದ ಮುನ್ನಡೆದು ಬಿಪಿಎಲ್ ಕಾರ್ಡ್‌ನಿಂದ ಮುಕ್ತಿ ಪಡೆಯಬೇಕು ಎಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕ ಬರೋಡ ಶಶಿಧರ ಶೆಟ್ಟಿ ಕರೆ ನೀಡಿದ್ದಾರೆ.
ಬಂಟ್ಸ್ ಹಾಸ್ಟೇಲ್‌ನ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ಜರುಗಿದ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಆಡಳಿತ ಮಂಡಳಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಕ್ಕೂಟವು ಕಳೆದ ಏಳೆಂಟು ವರ್ಷಗಳಿಂದ ಬಡವರ ಸೇವೆ ಮಾಡುತ್ತಿದ್ದು, ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ 25 ಕೋಟಿ ರೂಪಾಯಿಗೂ ಅಧಿಕ ಪರಿಹಾರ ಧನ ವಿತರಿಸಲಾಗಿದೆ. ಪ್ರಸ್ತುತ ಮುಲ್ಕಿಯ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿರ್ಮಾಣವಾಗುತ್ತಿರುವ ಸಭಾಭವನದ ಕಾಮಗಾರಿ ತ್ವರಿತಗತಿಯಲ್ಲಿ ಸಾಗುತ್ತಿದ್ದು, ಲೋಕಾರ್ಪಣೆಗೆ ಸಿದ್ಧಗೊಳ್ಳುತ್ತಿದೆ ಎಂದರು. ಸಮಾಜದ ಸಾಧಕರಾದ ಡಾ. ಕೆ. ಪ್ರಕಾಶ್ ಶೆಟ್ಟಿ, ಕನ್ಯಾನ ಸದಾಶಿವ ಶೆಟ್ಟಿ, ತೋನ್ಸೆ ಆನಂದ ಶೆಟ್ಟಿ, ಶಶಿಕಿರಣ್ ಶೆಟ್ಟಿ ಹಾಗೂ ರಾಜೇಶ್ ಶೆಟ್ಟಿ ಅವರ ಸಾಧನೆ ಎಲ್ಲರಿಗೂ ದಾರಿದೀಪವಾಗಿದೆ ಎಂದು ಅವರು ಉಲ್ಲೇಖಿಸಿದರು.
ಒಕ್ಕೂಟದ ನಿರ್ದೇಶಕ ಮುನಿಯಾಲು ಉದಯಕುಮಾರ್ ಶೆಟ್ಟಿ ಹಾಗೂ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ಮಾತನಾಡಿ, ಒಕ್ಕೂಟದ ಸಮಾಜಮುಖಿ ಕಾರ್ಯಗಳನ್ನು ಶ್ಲಾಘಿಸಿದರು. ಇದೇ ವೇಳೆ ಸನ್ಮಾನ ಸ್ವೀಕರಿಸಿದ ಹುಬ್ಬಳ್ಳಿ-ಧಾರವಾಡ ಬಂಟರ ಸಂಘದ ಅಧ್ಯಕ್ಷ ರಾಜೇಂದ್ರ ವಿ. ಶೆಟ್ಟಿ ಮಾತನಾಡಿ, ಮುಲ್ಕಿಯಲ್ಲಿ ನಿರ್ಮಾಣವಾಗುತ್ತಿರುವ ಸಂಕೀರ್ಣದ ಜತೆಗೆ ಐಕಳ ಹರೀಶ್ ಶೆಟ್ಟಿ ಅವರ ಹೆಸರಿನಲ್ಲಿ ಸಭಾಭವನ ನಿರ್ಮಿಸುವುದಾಗಿ ಘೋಷಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ಮಾತನಾಡಿ, ಎಲ್ಲಾ ಬಂಟರ ಸಂಘಗಳು ನೋಂದಾವಣೆ ಮಾಡಿಕೊಂಡು ಒಕ್ಕೂಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು. ಮುಲ್ಕಿಯ ಸಭಾಭವನವನ್ನು ಡಿಸೆಂಬರ್ ಒಳಗೆ ಪೂರ್ಣಗೊಳಿಸಲು ಎಲ್ಲರ ಸಹಕಾರ ಅಗತ್ಯ ಎಂದರು. ಸಭೆಯಲ್ಲಿ ವಿವಿಧ ಬಂಟರ ಸಂಘಗಳ ನೂತನ ಅಧ್ಯಕ್ಷರು ಹಾಗೂ ಪದಾಧಿಕಾರಿಗಳನ್ನು ಸನ್ಮಾನಿಸಲಾಯಿತು. ಜೊತೆಗೆ ತ್ರೈಮಾಸಿಕ ಲೆಕ್ಕಪತ್ರ ಮಂಡನೆ, ವರದಿ ವಾಚನ ಹಾಗೂ 30ನೇ ವಾರ್ಷಿಕ ಮಹಾಸಭೆಯ ದಿನಾಂಕವನ್ನು ನಿಗದಿಪಡಿಸಲಾಯಿತು.