ಧರ್ಮಸ್ಥಳ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಮಹೋತ್ಸವ ಸಭಾಭವನದಲ್ಲಿ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಪಿ. ಚಂದ್ರಶೇಖರ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಭಜನಾ ಪರಿಷತ್‌ನ ಕಾರ್ಯದರ್ಶಿ ಎ. ವೀರು ಶೆಟ್ಟಿ ಮಾತನಾಡಿ, ಪರಿಷತ್ ಮೂಲಕ ಬೇಸಿಗೆ ರಜೆಯಲ್ಲಿ ಮಕ್ಕಳ ವ್ಯಕ್ತಿತ್ವ ವಿಕಸನ ಕಾರ್ಯಕ್ರಮ, ಕಾನೂನು ಹಾಗೂ ಆರೋಗ್ಯ ಶಿಬಿರ, ಸ್ವಚ್ಛತಾ ಕಾರ್ಯಕ್ರಮ ಮತ್ತು ಶ್ರಮದಾನ ಸೇರಿದಂತೆ ಹಲವು ಸಾಮಾಜಿಕ-ಧಾರ್ಮಿಕ ಚಟುವಟಿಕೆಗಳನ್ನು ನಿರಂತರವಾಗಿ ನಡೆಸಲಾಗುತ್ತಿದ್ದು, ಇವು ಸಮಾಜದಲ್ಲಿ ಸಂಸ್ಕಾರಯುತ ಪರಿವರ್ತನೆಗೆ ಕಾರಣವಾಗಿವೆ ಎಂದರು. ಕಮ್ಮಟದ ಸಂಚಾಲಕ ಜಿ. ಸುಬ್ರಹ್ಮಣ್ಯ ಪ್ರಸಾದ್ ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಕಾರದೊಂದಿಗೆ ತಾಲೂಕು ಮಟ್ಟದ ಸಭೆಗಳು ನಡೆಯುತ್ತಿದ್ದು, ಸೆಪ್ಟೆಂಬರ್ 27ರಂದು ಮಧ್ಯಾಹ್ನ 2.30ರಿಂದ ಶಿಬಿರಾರ್ಥಿಗಳ ನೋಂದಣಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ತಿಳಿಸಿದರು.
ಸಭೆಯಲ್ಲಿ ಕಮ್ಮಟದ ವಸತಿ ವ್ಯವಸ್ಥೆ, ಉದ್ಘಾಟನಾ ಸಮಾರಂಭ, ನಗರ ಭಜನೆ, ಸಾಧಕ ಭಜನಾ ಮಂಡಳಿಗಳ ಆಯ್ಕೆ ಹಾಗೂ ಅಕ್ಟೋಬರ್ 4ರಂದು ನಡೆಯಲಿರುವ ಭಜನೋತ್ಸವ ಮತ್ತು ಸಮಾರೋಪ ಸಮಾರಂಭದ ಸಿದ್ಧತೆಗಳ ಕುರಿತು ಸಮಗ್ರ ಚರ್ಚೆ ನಡೆಸಿ, ವಿವಿಧ ಜವಾಬ್ದಾರಿಗಳಿಗೆ ಪೂರಕ ಸಮಿತಿಗಳನ್ನು ರಚಿಸಲಾಯಿತು. ವೇದಿಕೆಯಲ್ಲಿ ಸೀತಾರಾಮ ತೋಳ್ಪಾಡಿತ್ತಾಯ, ಬಿ. ಭುಜಬಲಿ, ಲಕ್ಷ್ಮೀನಾರಾಯಣ ರಾವ್, ಪಾರ್ಶ್ವನಾಥ್ ಜೈನ್, ಮಹಾವೀರ ಅಜ್ರಿ ಸೇರಿದಂತೆ ಹಲವು ಗಣ್ಯರು ಹಾಗೂ ಉಪಸಮಿತಿಗಳ ಪ್ರಮುಖರು ಉಪಸ್ಥಿತರಿದ್ದರು. ಪವಿತ್ರ ಸುನಿಲ್ ಸ್ವಾಗತಿಸಿ, ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರ್ವಹಿಸಿ ಧನ್ಯವಾದ ಅರ್ಪಿಸಿದರು.