image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ: ಸಿಎಂಗೆ ಸಂಸದ ಕ್ಯಾ. ಚೌಟ ತುರ್ತು ಪತ್ರ

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ: ಸಿಎಂಗೆ ಸಂಸದ ಕ್ಯಾ. ಚೌಟ ತುರ್ತು ಪತ್ರ

ಮಂಗಳೂರು : ಮಂಗಳೂರು ವ್ಯಾಪ್ತಿಯ ರೈಲು ಜಾಲವನ್ನು ದಕ್ಷಿಣ ರೈಲ್ವೆಯ ಪಾಲಕ್ಕಾಡ್‌ ವಿಭಾಗದಿಂದ ಬೇರ್ಪಡಿಸಿ ನೈರುತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಸಂಪೂರ್ಣವಾಗಿ ಕಾರ್ಯರೂಪಕ್ಕೆ ತರಲು ರಾಜ್ಯ ಸರ್ಕಾರವು ಆಡಳಿತಾತ್ಮಕ ಬೆಂಬಲ ನೀಡಬೇಕೆಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ಅವರು ಮುಖ್ಯಮಂತ್ರಿಗಳಿಗೆ ತುರ್ತು ಪತ್ರ ಬರೆದು ಮನವಿ ಮಾಡಿದ್ದಾರೆ.

ರೈಲ್ವೆ ಸಚಿವಾಲಯವು ಈ ಸಂಬಂಧ ಈಗಾಗಲೇ ಅಧಿಸೂಚನೆ ಹೊರಡಿಸಿದ್ದು, ಇದು ಕರಾವಳಿ ಪ್ರಯಾಣಿಕರ ಬಹುವರ್ಷಗಳ ಬೇಡಿಕೆಯನ್ನು ಈಡೇರಿಸಿದೆ. ಈ ಸೇರ್ಪಡೆ ಪ್ರಕ್ರಿಯೆಯು ಸಮಗ್ರ ಕರ್ನಾಟಕದ ರೈಲು ಜಾಲ ಬಲವರ್ಧನೆಗೆ ಮಹತ್ವದ ಹೆಜ್ಜೆಯಾಗಿದ್ದು, ಯಾವುದೇ ಆಡಳಿತಾತ್ಮಕ ವಿಳಂಬ ಅಥವಾ ಗೊಂದಲಗಳಿಗೆ ಆಸ್ಪದ ನೀಡದೆ ಪ್ರಕ್ರಿಯೆಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.

ಕೇಂದ್ರ ರೈಲ್ವೆ ಮಂಡಳಿಯ ಈ ಆದೇಶವನ್ನು ಮರುಪರಿಶೀಲಿಸುವಂತೆ ಕೇರಳ ಮುಖ್ಯಮಂತ್ರಿ ಹಾಗೂ ಅಲ್ಲಿನ ರಾಜಕೀಯ ಪಕ್ಷಗಳು ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ, ಕರ್ನಾಟಕ ಸರ್ಕಾರವು ತಕ್ಷಣವೇ ಮಧ್ಯಪ್ರವೇಶಿಸಿ ರಾಜ್ಯದ ಹಿತಾಸಕ್ತಿಯನ್ನು ಕಾಯಬೇಕಾಗಿದೆ. ಕೇಂದ್ರದ ಈ ಆದೇಶಕ್ಕೆ ಯಾವುದೇ ಅಡ್ಡಿ-ಆತಂಕಗಳು ಎದುರಾಗದಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರವು ತನ್ನ ಸ್ಪಷ್ಟ ಹಾಗೂ ಅಧಿಕೃತ ನಿಲುವನ್ನು ಕೇಂದ್ರ ಸರ್ಕಾರದ ಮುಂದೆ ಮಂಡಿಸಬೇಕು ಎಂದು ಅವರು ಕೋರಿದ್ದಾರೆ.

ಈ ನಿರ್ಧಾರವನ್ನು ನೆರೆಯ ರಾಜ್ಯದ ವಿರುದ್ಧದ ನಿಲುವಾಗಿ ನೋಡದೆ, ಮಂಗಳೂರಿನ ಆಡಳಿತಾತ್ಮಕ ಹಾಗೂ ಅಭಿವೃದ್ಧಿಯ ಅಗತ್ಯವೆಂದು ಪರಿಗಣಿಸಬೇಕಿದೆ. ಮಂಗಳೂರು ರೈಲು ಜಾಲ ಮೈಸೂರು ವಿಭಾಗದ ವ್ಯಾಪ್ತಿಗೆ ಬರುವುದರಿಂದ ಕಾರ್ಯಾಚರಣೆ, ಮೂಲಸೌಕರ್ಯ ವೃದ್ಧಿ ಮತ್ತು ಸಮಗ್ರ ಆಡಳಿತ ವ್ಯವಸ್ಥೆಗೆ ಹೆಚ್ಚಿನ ಅನುಕೂಲ ಸಿಗಲಿದೆ ಎಂದು ಸಂಸದರು ಸ್ಪಷ್ಟಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ