image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಎಸ್‌. ಜಗದೀಶ್ಚಂದ್ರ ಅಂಚನ್‌ಗೆ ಬಸವಶ್ರೀ ರಾಜ್ಯ ಪ್ರಶಸ್ತಿ

ಎಸ್‌. ಜಗದೀಶ್ಚಂದ್ರ ಅಂಚನ್‌ಗೆ ಬಸವಶ್ರೀ ರಾಜ್ಯ ಪ್ರಶಸ್ತಿ

ಮಂಗಳೂರು: ಕ್ರೀಡಾ ಅಂಕಣಕಾರ ಹಾಗೂ ಬರಹಗಾರರಾದ ಎಸ್‌ಜಗದೀಶ್ಚಂದ್ರ ಅಂಚನ್‌ ಸೂಟರ್‌ಪೇಟೆ ಅವರಿಗೆ ‘ಬಸವಶ್ರೀ ರಾಜ್ಯ ಪ್ರಶಸ್ತಿ’ ಘೋಷಿಸಲಾಗಿದೆ. ಬೆಂಗಳೂರಿನ ಶ್ರೀ ಜ್ಞಾನ ಮಂದಿರ ಎಜುಕೇಷನಲ್ ಅಂಡ್ ಸಾಂಸ್ಕೃತಿಕ ಟ್ರಸ್ಟ್ ತನ್ನ ಬೆಳ್ಳಿ ಹಬ್ಬದ ಸಂಭ್ರಮದ ಅಂಗವಾಗಿ ಕ್ರೀಡಾ ಸಾಹಿತ್ಯ ಕ್ಷೇತ್ರಕ್ಕೆ ಸಲ್ಲಿಸುತ್ತಿರುವ ಅಮೂಲ್ಯ ಸೇವೆಯನ್ನು ಗುರುತಿಸಿ ಈ ಪ್ರತಿಷ್ಠಿತ ಪ್ರಶಸ್ತಿಗೆ ಇವರನ್ನು ಆಯ್ಕೆ ಮಾಡಿದೆ.

ಮಾಧ್ಯಮ ಕ್ಷೇತ್ರದಲ್ಲಿ ಸುಮಾರು 32 ವರ್ಷಗಳಿಂದ ಸಕ್ರಿಯವಾಗಿರುವ ಎಸ್‌ಜಗದೀಶ್ಚಂದ್ರ ಅಂಚನ್‌ ಅವರು ಕ್ರೀಡಾ ಬರವಣಿಗೆ ಹಾಗೂ ಕ್ರೀಡಾ ಅಂಕಣಕಾರರಾಗಿ ಅಪಾರ ಸಾಧನೆ ಮಾಡಿದ್ದಾರೆ. ಇವರು ಜಿಲ್ಲೆ, ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಕನ್ನಡ ದಿನಪತ್ರಿಕೆಗಳು, ವಾರಪತ್ರಿಕೆಗಳು ಮತ್ತು ಮಾಸಪತ್ರಿಕೆಗಳಲ್ಲಿ ಒಟ್ಟು 4,500ಕ್ಕೂ ಅಧಿಕ ಕ್ರೀಡಾ ಲೇಖನಗಳು ಮತ್ತು ಅಂಕಣ ಬರಹಗಳನ್ನು ಬರೆದಿದ್ದಾರೆ. ಕ್ರೀಡಾ ಕ್ಷೇತ್ರದ ಬೆಳವಣಿಗೆ, ಸಾಧನೆಗಳು ಹಾಗೂ ಕ್ರೀಡಾ ವಿಷಯಗಳ ಕುರಿತು ಆಳವಾದ ವಿಮರ್ಶೆ ಮತ್ತು ವಿಶ್ಲೇಷಣಾತ್ಮಕ ಬರಹಗಳ ಮೂಲಕ ಕನ್ನಡ ಕ್ರೀಡಾ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದಾರೆ. ಕ್ರೀಡಾ ಬರವಣಿಗೆಯ ಜೊತೆಗೆ ಸಾಹಿತ್ಯ ಕ್ಷೇತ್ರದಲ್ಲೂ ಸಕ್ರಿಯರಾಗಿರುವ ಇವರು, ಇತ್ತೀಚೆಗೆ 'ತ್ಯಾಗಮಯಿ ಮೊಳಹಳ್ಳಿ' ಎಂಬ ಕೃತಿಯನ್ನು ರಚಿಸಿ ಬಿಡುಗಡೆಗೊಳಿಸಿದ್ದಾರೆ. ಮೂರು ದಶಕಗಳಿಗೂ ಹೆಚ್ಚಿನ ಕಾಲದ ಮಾಧ್ಯಮ ಸೇವೆಯನ್ನು ಪರಿಗಣಿಸಿ ಇವರಿಗೆ ಈಗಾಗಲೇ ವಿವಿಧ ರಾಜ್ಯ ಹಾಗೂ ಅಂತಾರಾಜ್ಯ ಮಟ್ಟದ ಪ್ರಶಸ್ತಿಗಳು ಲಭಿಸಿವೆ.
ಬೆಂಗಳೂರಿನ ಜೆಎಸ್‌ಎಸ್ ಸಭಾಂಗಣದಲ್ಲಿ ಇದೇ ತಿಂಗಳ 29ರಂದು ನಡೆಯಲಿರುವ ಶ್ರೀ ಜ್ಞಾನ ಮಂದಿರ ಎಜುಕೇಷನಲ್ ಅಂಡ್ ಸಾಂಸ್ಕೃತಿಕ ಟ್ರಸ್ಟ್‌ನ ಬೆಳ್ಳಿ ಹಬ್ಬದ ಸಮಾರೋಪ ಸಮಾರಂಭದಲ್ಲಿ ಎಸ್‌ಜಗದೀಶ್ಚಂದ್ರ ಅಂಚನ್‌ ಅವರಿಗೆ ಈ ಬಸವಶ್ರೀ ರಾಜ್ಯ ಪ್ರಶಸ್ತಿಯನ್ನು ಅಧಿಕೃತವಾಗಿ ಪ್ರದಾನ ಮಾಡಲಾಗುವುದು ಎಂದು ಟ್ರಸ್ಟ್‌ನ ಕಾರ್ಯದರ್ಶಿ ಎಚ್. ಸೋಮಶೇಖರ್ ತಿಳಿಸಿದ್ದಾರೆ.

Category
ಕರಾವಳಿ ತರಂಗಿಣಿ