ಮೂಡುಬಿದಿರೆ: ಮಕ್ಕಳನ್ನು ಲೈಂಗಿಕ ದೌರ್ಜನ್ಯ, ಶೋಷಣೆ ಹಾಗೂ ಅಶ್ಲೀಲ ಚಟುವಟಿಕೆಗಳಿಂದ ರಕ್ಷಿಸಲು ಪೋಕ್ಸೋ ಕಾಯ್ದೆ ಅತ್ಯಂತ ಪ್ರಮುಖವಾಗಿದೆ. ಪ್ರತಿಯೊಂದು ಮಗುವಿಗೂ ಸುರಕ್ಷಿತ ಹಾಗೂ ಗೌರವಯುತ ವಾತಾವರಣದಲ್ಲಿ ಬದುಕುವ ಹಕ್ಕನ್ನು ಕಾಯ್ದೆ ಖಾತರಿಪಡಿಸುತ್ತದೆ ಎಂದು ತರಬೇತುದಾರ ಗೌತಮ್ ಎಚ್. ಶೆಟ್ಟಿಗಾರ್ ತಿಳಿಸಿದರು.
ಆಳ್ವಾಸ್ ಪದವಿಪೂರ್ವ ಕಾಲೇಜಿನ ಮಕ್ಕಳ ರಕ್ಷಣಾ ಸಮಿತಿ ಹಾಗೂ ಮಕ್ಕಳ ಹಕ್ಕುಗಳ ಸಂಘದ ವತಿಯಿಂದ ಡಾ. ವಿ.ಎಸ್. ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಪೋಕ್ಸೋ ಕಾಯ್ದೆ: ಸುರಕ್ಷತೆ, ಜಾಗೃತಿ ಮತ್ತು ಸಬಲೀಕರಣ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳನ್ನು ಲೈಂಗಿಕ ದೌರ್ಜನ್ಯದಿಂದ ರಕ್ಷಿಸುವ ಉದ್ದೇಶವನ್ನು ಈ ಕಾನೂನು ಹೊಂದಿದೆ. ಮಕ್ಕಳ ಮೇಲಿನ ಯಾವುದೇ ಲೈಂಗಿಕ ದೌರ್ಜನ್ಯವನ್ನು ಮುಚ್ಚಿಡದೆ, ಧೈರ್ಯದಿಂದ ಪೋಷಕರು ಅಥವಾ ಶಿಕ್ಷಕರ ಗಮನಕ್ಕೆ ತರಬೇಕು. ಸಂತ್ರಸ್ತ ಮಕ್ಕಳಿಗೆ ಕಾನೂನು ರಕ್ಷಣೆ ದೊರೆಯುವಂತೆ ಕಾಯ್ದೆ ಕ್ರಮ ಕೈಗೊಳ್ಳುತ್ತದೆ. ವಿಶೇಷವಾಗಿ ಡಿಜಿಟಲ್ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪರಿಚಿತರೊಂದಿಗೆ ವೈಯಕ್ತಿಕ ಮಾಹಿತಿ ಮತ್ತು ಚಿತ್ರಗಳನ್ನು ಹಂಚಿಕೊಳ್ಳಬಾರದು ಎಂದು ಅವರು ಎಚ್ಚರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಉಪಪ್ರಾಂಶುಪಾಲೆ ಝಾನ್ಸಿ ಪಿ.ಎನ್. ಮಾತನಾಡಿ, ಮಕ್ಕಳು ತಮ್ಮ ಸಮಸ್ಯೆಗಳನ್ನು ಪೋಷಕರು ಮತ್ತು ಶಿಕ್ಷಕರೊಂದಿಗೆ ಮುಕ್ತವಾಗಿ ಹಂಚಿಕೊಂಡು ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದರು. ಸಮಾರಂಭದಲ್ಲಿ ಆಪ್ತ ಸಮಾಲೋಚಕಿ ರೆನಿಟಾ ಡಿಸೋಜ ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾ ಸಮಿತಿಯ ರಕ್ಷಣಾಧಿಕಾರಿ ಮಲ್ಲಿಕಾ ಎಂ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರೆ, ಉಪನ್ಯಾಸಕಿ ಶ್ವೇತಾಶ್ರೀ ಕಾರ್ಯಕ್ರಮ ನಿರೂಪಿಸಿದರು.