image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

‘ಭಾಷೆಯ ಬಳಕೆ ಒಂದು ಕಲೆ’ – ಡಾ. ಆರ್. ನರಸಿಂಹಮೂರ್ತಿ

‘ಭಾಷೆಯ ಬಳಕೆ ಒಂದು ಕಲೆ’ – ಡಾ. ಆರ್. ನರಸಿಂಹಮೂರ್ತಿ

ಮೂಡುಬಿದಿರೆ : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಕುವೆಂಪು ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ‘ಶಿಕ್ಷಣ ಮತ್ತು ರಂಗಭೂಮಿ’ ಉಪನ್ಯಾಸ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಹಾಗೂ ರಂಗಚಿಂತಕ ಡಾ. ಆರ್. ನರಸಿಂಹಮೂರ್ತಿ ಮಾತನಾಡಿದರು. ಭಾಷೆಯು ಕೇವಲ ವಿಚಾರಗಳನ್ನು ತಲುಪಿಸುವ ಸಂವಹನದ ಸಾಧನವಲ್ಲದೆ, ಅದೊಂದು ಕಲೆಯಾಗಿದೆ. ಧ್ವನಿಯ ಏರಿಳಿತ, ಲಯ, ಭಾವ ಹಾಗೂ ಸಂದರ್ಭಕ್ಕೆ ತಕ್ಕ ಬಳಕೆಯೇ ಮಾತನ್ನು ಪರಿಣಾಮಕಾರಿಯಾಗಿಸುತ್ತದೆ ಎಂದು ಅವರು ಪ್ರತಿಪಾದಿಸಿದರು. ಮಂಗಳೂರು ವಿಶ್ವವಿದ್ಯಾನಿಲಯದ ಎಸ್.ವಿ.ಪಿ. ಕನ್ನಡ ಅಧ್ಯಯನ ಸಂಸ್ಥೆ, ಕನ್ನಡ ಸಾಹಿತ್ಯ ಪರಿಷತ್ ಮೂಡುಬಿದಿರೆ ಘಟಕ, ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯ ಹಾಗೂ ‘ಗಿಣಿವಿಂಡು’ ಸಂಸ್ಥೆಯ ಸಹಯೋಗದಲ್ಲಿ ಈ ಕಾರ್ಯಕ್ರಮ ಜರುಗಿತು.

ಭಾಷೆಯನ್ನು ಕೇವಲ ಪಠ್ಯಪುಸ್ತಕದ ವಿಷಯವಾಗಿ ನೋಡದೆ, ಜೀವನದ ವಿವಿಧ ಸಂದರ್ಭಗಳಲ್ಲಿ ಪರಿಣಾಮಕಾರಿಯಾಗಿ ಬಳಸುವ ಕಲೆಯನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು. ಮಾತಿನ ಶೈಲಿ, ಪದಗಳ ಆಯ್ಕೆ ಮತ್ತು ಅಭಿವ್ಯಕ್ತಿ ವ್ಯಕ್ತಿತ್ವವನ್ನು ಪ್ರತಿಬಿಂಬಿಸುವುದರಿಂದ ಭಾಷೆಯ ಮೇಲಿನ ಹಿಡಿತವು ಶೈಕ್ಷಣಿಕ ಹಾಗೂ ವೃತ್ತಿಪರ ಬೆಳವಣಿಗೆಗೆ ಸಹಕಾರಿಯಾಗಿದೆ. ರಂಗಭೂಮಿಯು ಬದುಕನ್ನು ಅರ್ಥಮಾಡಿಕೊಳ್ಳುವ ಮತ್ತು ವ್ಯಕ್ತಿತ್ವ ರೂಪಿಸುವ ಮಾಧ್ಯಮವಾಗಿದ್ದು, ಸಂವಹನ ಕೌಶಲ, ಆತ್ಮವಿಶ್ವಾಸ, ಸಮಯಪ್ರಜ್ಞೆ ಹಾಗೂ ತಂಡವಾಗಿ ಕಾರ್ಯನಿರ್ವಹಿಸುವ ಗುಣಗಳನ್ನು ಬೆಳೆಸುತ್ತದೆ. ವೇದಿಕೆಯ ಅಭಿನಯವು ಸಂಕೋಚ ಮೀರಿ ಸಮಾಜವನ್ನು ಎದುರಿಸುವ ಧೈರ್ಯ ಹಾಗೂ ಹಲವು ವೃತ್ತಿ ಅವಕಾಶಗಳನ್ನು ನೀಡುತ್ತದೆ ಎಂದರು.

ಕಾರ್ಯಕ್ರಮದಲ್ಲಿದ್ದ ‘ಗಿಣಿವಿಂಡು’ ಅಧ್ಯಕ್ಷ ಡಾ. ಬಿ.ಎಚ್. ಚಂದ್ರಶೇಖರ ಶೆಟ್ಟಿ ಮಾತನಾಡಿ, ಇಂದಿನ ವೇಗದ ಬದುಕಿನಲ್ಲಿ ಕಲೆ ಮತ್ತು ಸಾಹಿತ್ಯವು ಮನುಷ್ಯರ ನಡುವೆ ಸಡಿಲವಾಗುತ್ತಿರುವ ಸಂಬಂಧಗಳನ್ನು ಬೆಸೆಯುವ ಸೇತುವೆಯಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು. ಕಾರ್ಯಕ್ರಮದಲ್ಲಿ ಗಿಣಿವಿಂಡು ಪ್ರಧಾನ ಕಾರ್ಯದರ್ಶಿ ಡಾ. ನಾಗಪ್ಪ ಗೌಡ ಆರ್. ಹಾಗೂ ನಿವೃತ್ತ ಪ್ರಾಂಶುಪಾಲ ಪ್ರೊ. ಕೃಷ್ಣಮೂರ್ತಿ ಉಪಸ್ಥಿತರಿದ್ದರು. ಕಸಾಪ ಮೂಡುಬಿದಿರೆ ಅಧ್ಯಕ್ಷ ವೇಣುಗೋಪಾಲ್ ಶೆಟ್ಟಿ ಸ್ವಾಗತಿಸಿ, ಆಳ್ವಾಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಶಂಕರಮೂರ್ತಿ ವಂದಿಸಿದರು. ಬಿ.ಎಡ್. ವಿದ್ಯಾರ್ಥಿನಿ ಚಂದನಾ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ