ಮಂಗಳೂರು: 1928ರ ಸೆಪ್ಟೆಂಬರ್ 23ರಂದು ಸ್ಥಾಪನೆಗೊಂಡ ತುಳುವ ಮಹಾಸಭೆಯ ಶತಮಾನೋತ್ಸವದ ಹಿನ್ನೆಲೆಯಲ್ಲಿ 2028ರಲ್ಲಿ ಉಡುಪಿಯಲ್ಲಿ 'ವಿಶ್ವ ತುಳುವ ಮಹಾಸಭೆ'ಯನ್ನು ಬೃಹತ್ ಪ್ರಮಾಣದಲ್ಲಿ ಆಯೋಜಿಸಲಾಗುವುದು ಎಂದು ತುಳುವ ಮಹಾಸಭೆ ಇಂಟರ್‌ನ್ಯಾಷನಲ್ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ ಘೋಷಿಸಿದ್ದಾರೆ. ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ತುಳು ವರ್ಲ್ಡ್ ಫೌಂಡೇಶನ್ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿಶ್ವದಾದ್ಯಂತ ನೆಲೆಸಿರುವ ತುಳುವರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ತುಳು ಭಾಷೆ, ಸಾಹಿತ್ಯ, ಲಿಪಿ, ಸಂಸ್ಕೃತಿ, ದೈವಾರಾಧನೆ, ಕಲೆ, ಕಳರಿ ಹಾಗೂ ತುಳುನಾಡಿನ ಸಾಂಪ್ರದಾಯಿಕ ಜ್ಞಾನವನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವುದು ಈ ಸಮಾವೇಶದ ಮುಖ್ಯ ಉದ್ದೇಶವಾಗಿದೆ. ಶತಮಾನೋತ್ಸವದ ಅಂಗವಾಗಿ ದೇಶ-ವಿದೇಶಗಳಲ್ಲಿ ವಿವಿಧ ಸಮಿತಿಗಳ ಮೂಲಕ ನೂರು ಪೂರ್ವಭಾವಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದ್ದು, ಇದರ ಸಮಾರೋಪ ಸಮಾರಂಭ ಉಡುಪಿಯಲ್ಲಿ ನಡೆಯಲಿದೆ. ಈ ಐತಿಹಾಸಿಕ ಕಾರ್ಯಕ್ರಮಕ್ಕೆ ಉಡುಪಿ ಮಠದ ಪೇಜಾವರ ಶ್ರೀಗಳು ರಾಜಾಂಗಣವನ್ನು ವೇದಿಕೆಯಾಗಿ ನೀಡಲು ಸಮ್ಮತಿಸಿದ್ದಾರೆ ಎಂದು ಮಹಾಸಭೆಯ ರಾಜ್ಯಾಧ್ಯಕ್ಷ ದೇವೇಂದ್ರ ಹೆಗ್ಡೆ ಕೊಕ್ರಾಡಿ ತಿಳಿಸಿದ್ದಾರೆ.
ಸಭೆಯಲ್ಲಿ ಬಸ್ರೂರಿನ ಶ್ರೀ ತುಳುವೇಶ್ವರ ದೇವಸ್ಥಾನ ಹಾಗೂ ಪಡುಬಿದ್ರಿಯ ನಿನ್ನಿಕಲ್ಲು ಪಾದೆ ಪುನರುತ್ಥಾನಕ್ಕೆ ಸಂಬಂಧಿಸಿದ ಭೂಮಿ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು. ದೇವಸ್ಥಾನದ ಪುನರುತ್ಥಾನ ಕಾರ್ಯಗಳನ್ನು ಸುಗಮವಾಗಿ ಮುನ್ನಡೆಸಲು ಕೂಡಲೇ ಪ್ರಾದೇಶಿಕ ಸಮಿತಿಯನ್ನು ರಚಿಸಿ ಕಾರ್ಯಪ್ರವೃತ್ತರಾಗುವುದಾಗಿ ಪ್ರಮುಖರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ತುಳು ವರ್ಲ್ಡ್ ಫೌಂಡೇಶನ್ ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಉಪಾಧ್ಯಕ್ಷ ಪ್ರವೀಣ್ ಕುಮಾರ್ ಕೊಡಿಯಾಲ್ ಬೈಲ್ ಸೇರಿದಂತೆ ಸಂಸ್ಥೆಯ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.