ಮೂಡುಬಿದಿರೆ: ಕೋಲಾರದ ನೀರಿನ ಅಭಾವ ನೀಗಿಸಲು ಹೊರಗಿನಿಂದ ನೀರು ಹರಿಸುವ ಬದಲು, ಸ್ಥಳೀಯವಾಗಿ ಬೀಳುವ ಮಳೆನೀರನ್ನೇ ಸಂರಕ್ಷಿಸಿ ಅಂತರ್ಜಲ ಮರುಪೂರಣಗೊಳಿಸುವ ಸಮಗ್ರ ಜಲ ನಿರ್ವಹಣಾ ತಂತ್ರ ರೂಪಿಸಬೇಕು ಎಂದು ಕೃಷಿ ವಿಜ್ಞಾನಿ ಹಾಗೂ ಲೇಖಕ ಡಾ. ಕೆ.ಎನ್. ಗಣೇಶಯ್ಯ ಪ್ರತಿಪಾದಿಸಿದ್ದಾರೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ರೋಸ್ಟ್ರಮ್ ವೇದಿಕೆ ಆಯೋಜಿಸಿದ್ದ ಪರಿಸರ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಹೊರಗಿನಿಂದ ನೀರು ತರುವ ಬೃಹತ್ ಯೋಜನೆಗಳು ಪ್ರಕೃತಿಯ ಅದೃಶ್ಯ ಪರಿಸರ ಕೊಂಡಿಗಳನ್ನು ಕಳಚಿ ದೀರ್ಘಾವಧಿಯಲ್ಲಿ ಅನಿರೀಕ್ಷಿತ ದುರಂತಗಳಿಗೆ ಕಾರಣವಾಗಬಹುದು ಎಂದು ಎಚ್ಚರಿಸಿದರು.
ತಲಕಾಡಿನ ಮರಳುಗಾಡಿನ ಉದಾಹರಣೆ ನೀಡಿದ ಅವರು, ತಲಕಾಡಿನಲ್ಲಿ ಮರಳು ಸಂಗ್ರಹವಾಗಿದ್ದು ಆಲಮೇಲಮ್ಮನ ಶಾಪದಿಂದಲ್ಲ, ಬದಲಿಗೆ ವಿಜಯನಗರ ಕಾಲದಲ್ಲಿ ನದಿಯ ಸಹಜ ಹರಿವಿಗೆ ತಡೆಯೊಡ್ಡಿದ್ದರಿಂದ ಸಂಭವಿಸಿದ ಮಾನವ ನಿರ್ಮಿತ ಪರಿಸರ ದುರಂತ ಎಂದು ವೈಜ್ಞಾನಿಕ ಆಧಾರಗಳೊಂದಿಗೆ ವಿವರಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆ ಹಾಗೂ ಗಾಡ್ಗಿಲ್ ವರದಿಯ ಕುರಿತು ಪ್ರಸ್ತಾಪಿಸಿದ ಅವರು, ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಭವಿಷ್ಯದ ಪೀಳಿಗೆಯ ನೀರಿನ ಭದ್ರತೆಗೆ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಸಂಸ್ಥೆಯ ಟ್ರಸ್ಟಿ ವಿವೇಕ ಆಳ್ವ ಮಾತನಾಡಿ, ಯುವಜನರಲ್ಲಿ ಜವಾಬ್ದಾರಿ ಹಾಗೂ ಆಲೋಚನಾ ಸ್ವಚ್ಛತೆ ಮುಖ್ಯ ಎಂದು ಹೇಳಿದರು.