ಉಜಿರೆ: ಕನ್ನಡ ಚಿತ್ರರಂಗದ ಖ್ಯಾತ ನಟ ಯಶ್ ಅವರು ಮಂಗಳವಾರ ಪ್ರಸಿದ್ಧ ಪುಣ್ಯಕ್ಷೇತ್ರವಾದ ಧರ್ಮಸ್ಥಳಕ್ಕೆ ಭೇಟಿ ನೀಡಿ, ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾಗಿ ಆಶೀರ್ವಾದ ಪಡೆದುಕೊಂಡಿದ್ದಾರೆ. ಧರ್ಮಸ್ಥಳಕ್ಕೆ ಆಗಮಿಸಿದ ನಟ ಯಶ್ ಅವರನ್ನು ಆರಂಭದಲ್ಲಿ ‘ಬೀಡು’ವಿನಲ್ಲಿ ಡಿ. ಹರ್ಷೇಂದ್ರಕುಮಾರ್ ಅವರು ಹಾರ ಹಾಕಿ ಅತ್ಯಂತ ಆದರದಿಂದ ಬರಮಾಡಿಕೊಂಡರು. ಬಳಿಕ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರನ್ನು ಭೇಟಿಯಾದ ಯಶ್, ಅವರ ಚರಣಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಚಲನಚಿತ್ರ ರಂಗದಲ್ಲಿ ಯಶ್ ಅವರ ಸೇವೆ, ಕಠಿಣ ಪರಿಶ್ರಮ ಹಾಗೂ ಅಪಾರ ಸಾಧನೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಅಭಿನಂದಿಸಿದ ಹೆಗ್ಗಡೆಯವರು, ಅವರು ಮುಂಬರುವ ದಿನಗಳಲ್ಲಿ ಇನ್ನೂ ಹೆಚ್ಚಿನ ಎತ್ತರದ ಸಾಧನೆ ಮಾಡಲಿ ಎಂದು ಹಾರೈಸಿ ಆಶೀರ್ವದಿಸಿದರು.
ಕ್ಷೇತ್ರದ ಪರವಾಗಿ ನಟ ಯಶ್ ಅವರನ್ನು ವೀರೇಂದ್ರ ಹೆಗ್ಗಡೆಯವರು ಶಾಲು ಹೊದಿಸಿ, ಸ್ಮರಣಿಕೆ ನೀಡಿ ಗೌರವಿಸಿದರು. ಹೆಗ್ಗಡೆಯವರಿಂದ ದೊರೆತ ಈ ಗೌರವ ಹಾಗೂ ಆಶೀರ್ವಾದಕ್ಕೆ ನಟ ಯಶ್ ಕೃತಜ್ಞತೆ ಸಲ್ಲಿಸಿದರು. ಬಳಿಕ ಶ್ರೀ ಮಂಜುನಾಥ ಸ್ವಾಮಿಯ ಸನ್ನಿಧಿಗೆ ತೆರಳಿದ ಯಶ್, ದೇವರ ದರ್ಶನ ಮಾಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ದರ್ಶನ ಮುಗಿಸಿದ ನಂತರ ಕ್ಷೇತ್ರದ 'ಶ್ರೀ ಸನ್ನಿಧಿ' ಅತಿಥಿಗೃಹದಲ್ಲಿ ಪ್ರಸಾದ ರೂಪದ ಭೋಜನ ಸ್ವೀಕರಿಸಿ, ತದನಂತರ ತಮ್ಮ ಮುಂದಿನ ಪ್ರಯಾಣವನ್ನು ಮುಂದುವರಿಸಿದರು. ಯಶ್ ಅವರ ಧರ್ಮಸ್ಥಳ ಭೇಟಿಯ ಸುದ್ದಿ ತಿಳಿಯುತ್ತಿದ್ದಂತೆ ಅವರನ್ನು ನೋಡಲು ಕ್ಷೇತ್ರದ ಸುತ್ತಮುತ್ತ ಅಭಿಮಾನಿಗಳು ಹಾಗೂ ಭಕ್ತಾದಿಗಳು ನೆರೆದಿದ್ದರು.