ಮಂಗಳೂರು:ದಕ್ಷಿಣ ವಲಯ ರುಮಟಾಲಜಿ ಸಮ್ಮೇಳನವು (SZIRACON 2026) ಆಗಸ್ಟ್ 28ರಿಂದ 30ರವರೆಗೆ ಮಂಗಳೂರಿನ ಇಂಡಿಯಾನಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯಲಿದೆ. ಇಂಡಿಯನ್ ರುಮಟಾಲಜಿ ಅಸೋಸಿಯೇಷನ್‌ನ ಕರ್ನಾಟಕ ಘಟಕದ ವತಿಯಿಂದ ಆಯೋಜಿಸಲಾಗಿರುವ ಈ ಸಮ್ಮೇಳನವು ಮಂಗಳೂರು ಹಾಗೂ ಕರಾವಳಿ ಕರ್ನಾಟಕದಲ್ಲಿ ರುಮಟಾಲಜಿ ವಿಷಯಕ್ಕೆ ಮೀಸಲಾಗಿರುವ ಮೊದಲ ಸಮ್ಮೇಳನವಾಗಿದೆ ಎಂದು ಡಾ. ಸಜನ್ ಶೆಣೈ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,
ದಕ್ಷಿಣ ಭಾರತದ ವಿವಿಧ ಭಾಗಗಳಿಂದ 450ಕ್ಕೂ ಹೆಚ್ಚು ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ.
ಸಮ್ಮೇಳನದ ಧೈಯವಾಕ್ಯವಾಗಿ 'ಸನ್ಮನ್ವಯ ಮತ್ತು ಕರಾವಳಿ ಜ್ಞಾನದ ಆಳಕೆ, ಶೈಕ್ಷಣಿಕ ಪಯಣ' (An Academic Dive into Integration and Coastal Wisdom) ಎಂಬುದನ್ನು ಆಯ್ಕೆ ಮಾಡಲಾಗಿದೆ ಎಂದರು. ಸಾಂಪ್ರದಾಯಿಕ ರೋಗಿ ಪರೀಕ್ಷಾ ಕೌಶಲ್ಯಗಳನ್ನು ಇತ್ತೀಚಿನ ವೈದ್ಯಕೀಯ, ವೈಜ್ಞಾನಿಕ ತಂತ್ರಜ್ಞಾನದೊಂದಿಗೆ ಸಂಯೋಜಿಸುವ ಮಾರ್ಗಗಳನ್ನು ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಗುವುದು. ಮೂರು ದಿನಗಳ ಈ ಸಮ್ಮೇಳನದಲ್ಲಿ ತಜ್ಞರ ಉಪನ್ಯಾಸಗಳು, ಕ್ಲಿನಿಕಲ್ ಮಾಸ್ಟರ್‌ಕ್ಲಾಸ್‌ಗಳು, ಬಹುವಿಷಯಕ ಚರ್ಚೆಗಳು ಮತ್ತು ಸಂಶೋಧನಾ ಪ್ರಬಂಧಗಳ ಮಂಡನೆ ನಡೆಯಲಿದೆ.
ರುಮಟಾಲಜಿ, ಚರ್ಮರೋಗಶಾಸ್ತ್ರ, ಮೂತ್ರಪಿಂಡರೋಗಶಾಸ್ತ್ರ ಮತ್ತು ಸ್ವಾಸಕೋಶ ವೈದ್ಯಕೀಯವನ್ನು ಒಳಗೊಂಡ ಸಮನ್ವಿತ ಚಿಕಿತ್ಸಾ ಮಾರ್ಗಗಳು, ಜೈವಿಕ ಚಿಕಿತ್ಸೆಗಳು ಹಾಗೂ ಕೃತಕ ಬುದ್ಧಿಮತ್ತೆಯ (AI) ಪಾತ್ರದ ಕುರಿತು ಪ್ರಮುಖ ಚರ್ಚೆಗಳು ನಡೆಯಲಿವೆ. ಕರಾವಳಿ ಕರ್ನಾಟಕದಲ್ಲಿ ಮೊದಲ ಬಾರಿಗೆ ಆಯೋಜಿಸಲಾಗುತ್ತಿರುವ ಈ ಶೈಕ್ಷಣಿಕ ಸಮ್ಮೇಳನವು ಸಾಕ್ಷ್ಯಾಧಾರಿತ ಮತ್ತು ರೋಗಿಕೇಂದ್ರಿತ ಚಿಕಿತ್ಸೆಯನ್ನು ಉತ್ತೇಜಿಸುವ ಉದ್ದೇಶ ಹೊಂದಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಡಾ.ಅಶ್ವಿನಿ ಕಾಮತ್, ಡಾ.ಸುಮಂತ್, ಡಾ.ಸಮಗ ಬಾಳಿಗ ಉಪಸ್ಥಿತರಿದ್ದರು.