image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೋಡಿಕಲ್‌ನಲ್ಲಿ ಹಿಂದೂ ಗಣೇಶೋತ್ಸವ: ಸೆಪ್ಟೆಂಬರ್ 14ರಿಂದ 16ರವರೆಗೆ ವಿಜೃಂಭಣೆಯ ಆಚರಣೆ

ಕೋಡಿಕಲ್‌ನಲ್ಲಿ ಹಿಂದೂ ಗಣೇಶೋತ್ಸವ: ಸೆಪ್ಟೆಂಬರ್ 14ರಿಂದ 16ರವರೆಗೆ ವಿಜೃಂಭಣೆಯ ಆಚರಣೆ

ಮಂಗಳೂರು: ವಿಶ್ವ ಹಿಂದೂ ಪರಿಷತ್ - ಬಜರಂಗದಳ ಕೋಡಿಕಲ್ ಶಾಖೆ ಹಾಗೂ ಹಿಂದೂ ಗಣೇಶೋತ್ಸವ ಸಮಿತಿಯ ವತಿಯಿಂದ ಕೋಡಿಕಲ್‌ನಲ್ಲಿ 16ನೇ ವರ್ಷದ ಹಿಂದೂ ಗಣೇಶೋತ್ಸವವು ಸೆಪ್ಟೆಂಬರ್ 14ರ ಸೋಮವಾರದಿಂದ ಸೆಪ್ಟೆಂಬರ್ 16ರ ಬುಧವಾರದವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಮನೋಜ್ ಕುಮಾರ್ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ​ಸೆಪ್ಟೆಂಬರ್ 14ರಂದು ಬೆಳಗ್ಗೆ ಗಣೇಶ ಸ್ಥಾಪನೆ ನೆರವೇರಲಿದ್ದು, ಮೂರು ದಿನಗಳ ಕಾಲ ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು. 

ಆಗಸ್ಟ್‌ 30ರಂದು ಶಾಲಾ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ದೈಹಿಕ ಹಾಗೂ ಬೌದ್ಧಿಕ ಸ್ಪರ್ಧೆಗಳನ್ನು ಕೋಡಿಕಲ್‌ನ ಸರ್ಕಾರಿ ಶಾಲೆಯಲ್ಲಿ ಆಯೋಜಿಸಲಾಗಿದೆ. ಇದರೊಂದಿಗೆ ಸಮಾಜಮುಖಿ ಸೇವಾ ಚಟುವಟಿಕೆಗಳಾದ ರಕ್ತದಾನ ಶಿಬಿರ, ಬಾಲ ಸಂಸ್ಕಾರ ಶಿಬಿರ, ಗೋ ರಕ್ಷಾ ಅಭಿಯಾನ ಮತ್ತು ಮನೆ ಮನೆ ಭಜನೆ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

ಸೆಪ್ಟೆಂಬರ್ 14ರಂದು ಸಂಜೆ ಧಾರ್ಮಿಕ ಸಭಾ ಕಾರ್ಯಕ್ರಮ ಹಾಗೂ ಚೇತನ್ ಆರ್ಟ್ಸ್ ಕುಡ್ಲ ಕಲಾವಿದರಿಂದ ತುಳು ಪೌರಾಣಿಕ ನಾಟಕ "ಪೊರಿಪುದಪ್ಪೆ ಜಲದುಗೆ" ಪ್ರದರ್ಶನಗೊಳ್ಳಲಿದೆ. ಸೆಪ್ಟೆಂಬರ್ 15ರಂದು ಮಹಾಪೂಜೆಯ ಬಳಿಕ ಶಾರದಾ ಆರ್ಟ್ಸ್ ಕಲಾವಿದರ ಅಭಿನಯದ "ಒಂತೆ ಲೇಟಾಂಡ್" ತುಳು ಹಾಸ್ಯಮಯ ನಾಟಕ ಪ್ರದರ್ಶನವಿದೆ.

ಸೆಪ್ಟೆಂಬರ್ 16ರಂದು ಸಂಜೆ 6 ಗಂಟೆಗೆ ವಿಸರ್ಜನಾ ಪೂಜೆ ನಡೆಯಲಿದ್ದು, ಕೋಡಿಕಲ್ ಮುಖ್ಯ ರಸ್ತೆಯ ಮೂಲಕ ಸಂಚರಿಸಿ ದಂಜೇಲ್‌ನ ಫಲ್ಗುಣಿ ನದಿಯಲ್ಲಿ ವೈಭವದ ಶೋಭಾಯಾತ್ರೆಯೊಂದಿಗೆ ಗಣೇಶ ಮೂರ್ತಿಯ ವಿಸರ್ಜನೆ ನೆರವೇರಲಿದೆ ಎಂದರು. 

ಪತ್ರಿಕಾ ಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ, ಕಿರಣ್ ಜೋಗಿ, ಸತೀಶ್ ಶೆಟ್ಟಿ, ಮಹೇಶ್ ಕೋಡಿಕಲ್‌ ಹಾಗೂ ಇತರ ಪ್ರಮುಖರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ