image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರಾವಳಿಯಲ್ಲಿ ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ

ಕರಾವಳಿಯಲ್ಲಿ ಅಡಿಕೆ ರೋಗ ನಿಯಂತ್ರಣಕ್ಕೆ ಕೇಂದ್ರದ ಬೆಂಬಲ

ಮಂಗಳೂರು: ದಕ್ಷಿಣ ಕನ್ನಡ ಸೇರಿದಂತೆ ಕರ್ನಾಟಕದ ಕರಾವಳಿ ಹಾಗೂ ಮಲೆನಾಡು ಪ್ರದೇಶಗಳಲ್ಲಿ ಅಡಿಕೆ ಬೆಳೆಗೆ ಬಾಧಿಸಿರುವ ಎಲೆಚುಕ್ಕಿ ಮತ್ತು ಹಳದಿ ಎಲೆ ರೋಗಗಳ ನಿಯಂತ್ರಣಕ್ಕೆ ವೈಜ್ಞಾನಿಕ ಸಂಶೋಧನೆ, ಕ್ಷೇತ್ರ ಸಮೀಕ್ಷೆ ಹಾಗೂ ಸಮಗ್ರ ರೋಗ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ತಿಳಿಸಿದ್ದಾರೆ. ಲೋಕಸಭೆಯ ನಿಯಮ 377ರ ಅಡಿಯಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಪ್ರಸ್ತಾಪಿಸಿದ ವಿಷಯಕ್ಕೆ ಸಚಿವರು ಈ ಮಾಹಿತಿ ಹಂಚಿಕೊಂಡಿದ್ದಾರೆ.

ಕಾಸರಗೋಡಿನ ಕೇಂದ್ರ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (ICAR-CPCRI) ಮೂಲಕ ರೋಗ ನಿರ್ವಹಣೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ವಿವರಿಸಿದ ಸಚಿವರು, ಬೆಳ್ತಂಗಡಿ ಹಾಗೂ ಸುಳ್ಯ ಸೇರಿದಂತೆ ಏಳು ಕ್ಲಸ್ಟರ್‌ಗಳಲ್ಲಿ ಸಮಗ್ರ ರೋಗ ನಿರ್ವಹಣಾ ಪದ್ಧತಿಗಳ ಕ್ಷೇತ್ರ ಪ್ರಾತ್ಯಕ್ಷಿಕೆ ನಡೆಸಲಾಗಿದೆ ಎಂದಿದ್ದಾರೆ. ಈ ವೈಜ್ಞಾನಿಕ ಕ್ರಮಗಳನ್ನು ಅಳವಡಿಸಿಕೊಂಡ ನಂತರ ತೋಟಗಳಲ್ಲಿ ರೋಗದ ತೀವ್ರತೆ ಗಮನಾರ್ಹವಾಗಿ ಕಡಿಮೆಯಾಗಿದೆ. ಮುಂಗಾರಿಗೆ ಮುನ್ನ ಹಾಗೂ ಮುಂಗಾರಿನ ಸಮಯದಲ್ಲಿ ಶಿಫಾರಸು ಮಾಡಿದ ಶಿಲೀಂಧ್ರ ನಾಶಕಗಳನ್ನು ಬಳಸುವುದರಿಂದ ಕೊಳೆರೋಗ ನಿಯಂತ್ರಣಕ್ಕೆ ಬಂದಿದ್ದು, ಅಡಿಕೆ ಇಳುವರಿಯಲ್ಲೂ ಸುಧಾರಣೆ ಕಂಡುಬಂದಿದೆ.

ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿರುವ ಎಲೆ ಚುಕ್ಕೆ ರೋಗವನ್ನು ಕೃಷಿ ಸಚಿವಾಲಯ ಪರಿಶೀಲಿಸುತ್ತಿದೆ. 2022ರ ನವೆಂಬರ್‌ನಲ್ಲಿ ರಚನೆಯಾದ ರಾಷ್ಟ್ರೀಯ ಅಡಿಕೆ ವೈಜ್ಞಾನಿಕ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಮಿಷನ್ (MIDH) ಅಡಿಯಲ್ಲಿ ಪ್ರಾತ್ಯಕ್ಷಿಕೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಶಿರಸಿ, ಸಿದ್ದಾಪುರ, ಬೆಳ್ತಂಗಡಿ ಹಾಗೂ ಸುಳ್ಯ ಭಾಗಗಳಲ್ಲಿ ಸಮುದಾಯ ಆಧಾರಿತ ರೋಗ ನಿರ್ವಹಣೆ, ರೈತರಲ್ಲಿ ಜಾಗೃತಿ ಮತ್ತು ವೈಜ್ಞಾನಿಕ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತಿದ್ದು, ಕರಾವಳಿ ಹಾಗೂ ಮಲೆನಾಡಿನ ಅಡಿಕೆ ಬೆಳೆಗಾರರ ಹಿತ ಕಾಯಲು ICAR-CPCRI ನಿರಂತರ ತಾಂತ್ರಿಕ ನೆರವು ನೀಡಲಿದೆ ಎಂದು ಸಚಿವರು ಭರವಸೆ ನೀಡಿದ್ದಾರೆ.

Category
ಕರಾವಳಿ ತರಂಗಿಣಿ