ಮಂಗಳೂರು: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಕೇಂದ್ರ ಸರ್ಕಾರವು ರೈತರಿಗೆ ಪ್ರತಿ 4 ತಿಂಗಳಿಗೊಮ್ಮೆ ₹2,000 ದಂತೆ ವರ್ಷಕ್ಕೆ ಒಟ್ಟು 3 ಕಂತುಗಳಲ್ಲಿ ₹6,000 ಸಹಾಯಧನವನ್ನು ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುತ್ತಿದೆ. ಈ ಯೋಜನೆಯ ನೆರವು ಪಡೆಯಲು ರೈತರು ಪ್ರತಿ ವರ್ಷ ಬಯೋಮೆಟ್ರಿಕ್ ಇ-ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯವಾಗಿದೆ.
ರೈತರು ಸಮೀಪದ ಗ್ರಾಹಕ ಸೇವಾ ಕೇಂದ್ರ, ಕರ್ನಾಟಕ ಒನ್ ಅಥವಾ ಗ್ರಾಮ ಒನ್ ಕೇಂದ್ರಗಳಿಗೆ ತೆರಳಿ ಆಧಾರ್ ಸಂಖ್ಯೆ ನೀಡಿ ಬಯೋಮೆಟ್ರಿಕ್ ಇ-ಕೆವೈಸಿ ಪೂರ್ಣಗೊಳಿಸಬಹುದು. ಅಥವಾ ವಿ.ಎನ್.ಒ ಮೊಬೈಲ್ ಆ್ಯಪ್ ಮೂಲಕ ಮುಖ ದೃಢೀಕರಿಸಿ ಇ-ಕೆವೈಸಿ ಮಾಡಿಕೊಳ್ಳಲು ಅವಕಾಶವಿದೆ. ಆ್ಯಪ್ ಬಳಕೆಯಲ್ಲಿ ಕಷ್ಟವಾದಲ್ಲಿ ಸಮೀಪದ ರೈತ ಸಂಪರ್ಕ ಕೇಂದ್ರ ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು.
ಪ್ರಸ್ತುತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಒಟ್ಟು 1,38,085 ರೈತರ ಇ-ಕೆವೈಸಿ ಬಾಕಿ ಇದೆ. ತಾಲೂಕುವಾರು ಬಾಕಿ ವಿವರ: ಬೆಳ್ತಂಗಡಿ 32,117, ಬಂಟ್ವಾಳ 30,035, ಪುತ್ತೂರು 18,511, ಕಡಬ 18,025, ಸುಳ್ಯ 15,741, ಮೂಡಬಿದ್ರೆ 7,431, ಮಂಗಳೂರು 7,306, ಉಳ್ಳಾಲ 5,213 ಹಾಗೂ ಮುಲ್ಕಿ 3,706. ಇ-ಕೆವೈಸಿ ಪೂರ್ಣಗೊಳಿಸಿದ ರೈತರ ಖಾತೆಗೆ ಮಾತ್ರ ಮುಂದಿನ ಕಂತಿನ ಆರ್ಥಿಕ ನೆರವು ವರ್ಗಾವಣೆಯಾಗಲಿದೆ ಎಂದು ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.