image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇಂಜಿನಿಯರಿಂಗ್ ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಲಿ: ಡಾ. ಪೂರ್ಣಿಮಾ ಬಾಳಿಗಾ

ಇಂಜಿನಿಯರಿಂಗ್ ಜ್ಞಾನ ಸಮಾಜದ ಒಳಿತಿಗೆ ಬಳಕೆಯಾಗಲಿ: ಡಾ. ಪೂರ್ಣಿಮಾ ಬಾಳಿಗಾ

ಮೂಡುಬಿದಿರೆ: ಇಂಜಿನಿಯರಿಂಗ್ ಕ್ಷೇತ್ರವು ಕೇವಲ ಸಮೀಕರಣಗಳು, ಯಂತ್ರಗಳು ಹಾಗೂ ಪರೀಕ್ಷೆಗಳಿಗೆ ಸೀಮಿತವಾಗಿರದೆ ನೈಜ ಜೀವನದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಸೃಜನಶೀಲ ಹಾಗೂ ಹೊಣೆಗಾರಿಕೆಯ ಕ್ಷೇತ್ರವಾಗಿದೆ ಎಂದು ಮಾಹೆಯ ವಿಶ್ರಾಂತ ಸಹ ಕುಲಾಧಿಪತಿ ಡಾ. ಪೂರ್ಣಿಮಾ ಬಾಳಿಗಾ ಹೇಳಿದರು.

ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (ಎಐಇಟಿ) ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ‘ಆಗಮನ’ ಇಂಡಕ್ಷನ್ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ವಿದ್ಯಾರ್ಥಿ ಜೀವನದ ನಾಲ್ಕು ವರ್ಷಗಳು ಜ್ಞಾನಾರ್ಜನೆ, ಪ್ರಯೋಗಶೀಲತೆ ಹಾಗೂ ಸ್ವ-ಅಭಿವೃದ್ಧಿಗೆ ಪೂರಕವಾಗಬೇಕು. ಕೃತಕ ಬುದ್ಧಿಮತ್ತೆ, ನವೀಕರಿಸಬಹುದಾದ ಇಂಧನ, ಆರೋಗ್ಯ ಹಾಗೂ ಬಾಹ್ಯಾಕಾಶ ತಂತ್ರಜ್ಞಾನದಂತಹ ಉದಯೋನ್ಮುಖ ಕ್ಷೇತ್ರಗಳಲ್ಲಿ ಯುವ ಇಂಜಿನಿಯರ್‌ಗಳಿಗೆ ಅಪಾರ ಅವಕಾಶಗಳಿವೆ. ವಿದ್ಯಾರ್ಥಿಗಳು ತಾಂತ್ರಿಕ ಜ್ಞಾನದ ಜತೆಗೆ ಸಹಾನುಭೂತಿ, ಸಾಮಾಜಿಕ ಹೊಣೆಗಾರಿಕೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮಂಗಳೂರು ಸೇನಾ ನೇಮಕಾತಿ ಕಚೇರಿಯ ನಿರ್ದೇಶಕ ಕರ್ನಲ್ ಸೋಮು ಮಹಾರಾಜನ್ ಮಾತನಾಡಿ, ಯಶಸ್ಸಿಗೆ ಶಿಸ್ತು, ನಿರಂತರತೆ ಹಾಗೂ ಕಠಿಣ ಪರಿಶ್ರಮ ಅತ್ಯಗತ್ಯ. ಇಂಜಿನಿಯರಿಂಗ್ ವಿದ್ಯಾರ್ಥಿಗಳು ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಧಿಕಾರಿ ಹುದ್ದೆಗಳನ್ನು ಪಡೆಯುವ ಗುರಿ ಹೊಂದಬೇಕು. ಕಾಲೇಜು ಜೀವನದಲ್ಲಿ ಪಾಲಕರು ಹಾಗೂ ಶಿಕ್ಷಕರ ನೇರ ಮೇಲ್ವಿಚಾರಣೆ ಇಲ್ಲದಿದ್ದರೂ ವಿದ್ಯಾರ್ಥಿಗಳು ಸ್ವಯಂ ಶಿಸ್ತನ್ನು ಕಾಪಾಡಿಕೊಳ್ಳಬೇಕು ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಶಿಕ್ಷಣವು ಕೇವಲ ಉದ್ಯೋಗ ಅಥವಾ ಪ್ರಮಾಣಪತ್ರ ಪಡೆಯುವುದಕ್ಕೆ ಸೀಮಿತವಾಗದೆ ಸಮಾಜಕ್ಕೆ ಕೊಡುಗೆ ನೀಡುವ ಜವಾಬ್ದಾರಿಯುತ ವ್ಯಕ್ತಿತ್ವವನ್ನು ರೂಪಿಸಬೇಕು. ಜೆನ್-ಝಿ ಪೀಳಿಗೆಯ ಹೊಸ ಆಲೋಚನೆ ಹಾಗೂ ತಂತ್ರಜ್ಞಾನ ಜ್ಞಾನವು ರಾಷ್ಟ್ರದ ಪ್ರಗತಿಗೆ ಹೊಸ ದಿಕ್ಕು ನೀಡಬಲ್ಲದು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡೀಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪನ್ಯಾಸಕರಾದ ಡಾ. ರವಿಕುಮಾರ್ ಸ್ವಾಗತಿಸಿ, ಡಾ. ಹರೀಶ್ ಕುಂದರ್ ವಂದಿಸಿದರು. ವಿದ್ಯಾರ್ಥಿನಿಯರಾದ ಸ್ಟೆಲ್ಲಾ ಸಾಜಿ ಹಾಗೂ ಶಾರ್ವರಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ