image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರೊ. ಬಿ.ಎ. ವಿವೇಕ ರೈ ಸರ್ವ ಭಾಷಿಕರಿಗೂ ಮಾರ್ಗದರ್ಶಕ: ಕಾಸರಗೋಡು ಚಿನ್ನಾ

ಪ್ರೊ. ಬಿ.ಎ. ವಿವೇಕ ರೈ ಸರ್ವ ಭಾಷಿಕರಿಗೂ ಮಾರ್ಗದರ್ಶಕ: ಕಾಸರಗೋಡು ಚಿನ್ನಾ

ಮಂಗಳೂರು: ಹಿರಿಯ ವಿದ್ವಾಂಸ ಪ್ರೊ. ಬಿ.ಎ. ವಿವೇಕ ರೈ ಅವರು ತಮ್ಮ ಅಧ್ಯಯನ ಮತ್ತು ಅನುಭವದ ನೆಲೆಯಿಂದ ವಾಸ್ತವ ವಿಚಾರಗಳನ್ನು ಸಮಚಿತ್ತ ಹಾಗೂ ಸ್ಪಷ್ಟವಾಗಿ ಪ್ರಸ್ತುತಪಡಿಸುವ ಖಚಿತತೆ ಹೊಂದಿದ್ದು, ತುಳು, ಬ್ಯಾರಿ, ಕೊಂಕಣಿ ಸೇರಿದಂತೆ ಎಲ್ಲಾ ಭಾಷಿಕರಿಗೂ ಮಾರ್ಗದರ್ಶಕರಾಗಿದ್ದಾರೆ ಎಂದು ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಕಾಸರಗೋಡು ಚಿನ್ನಾ ಹೇಳಿದರು. ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಆಯೋಜಿಸಿದ್ದ ‘ಬೆನ್ನಿದ ಪನಿ ದೊಂಪ’ ಪ್ರೊ. ವಿವೇಕ ರೈ ಅವರ ತುಳು ಸಾಹಿತ್ಯ ಅವಲೋಕನ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿದ್ದ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಅಧ್ಯಕ್ಷ ಬಿ.ಎ. ಮುಹಮ್ಮದ್ ಹನೀಫ್ ಮಾತನಾಡಿ, ಬ್ಯಾರಿ ಅಕಾಡೆಮಿಯು ಪ್ರಕಟಿಸಿದ ಬ್ಯಾರಿ ಶಬ್ದಕೋಶ ರೂಪಿಸಲು ಪ್ರೊ. ವಿವೇಕ ರೈ ನೀಡಿದ ದೊಡ್ಡ ಮಟ್ಟದ ಸಲಹೆ ಹಾಗೂ ಸಹಕಾರವನ್ನು ಸ್ಮರಿಸಿದರು.

ನಿವೃತ್ತ ಪ್ರಾಂಶುಪಾಲ ಹಾಗೂ ತುಳು ಜಾನಪದ ಸಂಶೋಧಕ ಡಾ. ಪೂವಪ್ಪ ಕಣಿಯೂರು ಮಾತನಾಡಿ, ವಿವೇಕ ರೈ ಅವರು ತಮ್ಮ ವಿದ್ಯಾರ್ಥಿಗಳಿಗೆ ಬದುಕು ರೂಪಿಸುವ ಹಾಗೂ ಸಂಸ್ಕೃತಿಯ ನಡೆಗಳನ್ನು ತಿಳಿಸಿಕೊಡುತ್ತಾ ನೂರಾರು ಯುವ ಸಂಶೋಧಕರಿಗೆ ನಿರಂತರ ಮಾರ್ಗದರ್ಶಕರಾಗಿ ಬೆಂಬಲ ನೀಡಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ತುಳು ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಪ್ರಸ್ತಾವಿಕವಾಗಿ ಮಾತನಾಡಿದರು. ಅಕಾಡೆಮಿ ಸದಸ್ಯರಾದ ಕುಂಬ್ರ ದುರ್ಗಾ ಪ್ರಸಾದ್ ರೈ, ಅಕ್ಷಯ ಆರ್. ಶೆಟ್ಟಿ ಹಾಗೂ ಪಾಂಗಾಳ ಬಾಬು ಕೊರಗ ಉಪಸ್ಥಿತರಿದ್ದರು. ಅಕಾಡೆಮಿ ಸದಸ್ಯ ಉದ್ಯಾವರ ನಾಗೇಶ್ ಕುಮಾರ್ ಕಾರ್ಯಕ್ರಮ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.

Category
ಕರಾವಳಿ ತರಂಗಿಣಿ