ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ ಮಂಗಳೂರು ಹಾಗೂ ಮಂಗಳೂರಿನ ಬ್ಯಾರೀಸ್ ಪಬ್ಲಿಕ್ ಸ್ಕೂಲ್ ಲೇಡಿಹಿಲ್ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ 14 ಹಾಗೂ 17 ವರ್ಷ ವಯೋಮಿತಿಯ ಬಾಲಕ-ಬಾಲಕಿಯರ ಜಿಲ್ಲಾ ಮಟ್ಟದ ಈಜು ಸ್ಪರ್ಧೆಯಲ್ಲಿ ಆಳ್ವಾಸ್ ಶಾಲೆಯ ವಿದ್ಯಾರ್ಥಿಗಳು ಒಟ್ಟು 12 ಪದಕಗಳನ್ನು (3 ಚಿನ್ನ, 6 ಬೆಳ್ಳಿ, 3 ಕಂಚು) ಗೆದ್ದು ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಈ ಪೈಕಿ 4 ವಿದ್ಯಾರ್ಥಿಗಳು ಬೆಂಗಳೂರಿನ ಬಸವನಗುಡಿ ಈಜುಕೊಳದಲ್ಲಿ ನಡೆಯಲಿರುವ ರಾಜ್ಯಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
14 ವರ್ಷ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಪ್ರೀತಿ 400 ಮೀಟರ್ ಫ್ರೀಸ್ಟೈಲ್‌ನಲ್ಲಿ ಪ್ರಥಮ ಹಾಗೂ 200 ಮೀಟರ್ ಐಎಮ್ ಮತ್ತು 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. 17 ವರ್ಷ ವಯೋಮಿತಿಯ ಬಾಲಕರ ವಿಭಾಗದಲ್ಲಿ ಅಭಿಷೇಕ್ 200 ಮೀಟರ್ ಫ್ರೀಸ್ಟೈಲ್ ಹಾಗೂ 400 ಮೀಟರ್ ಐಎಮ್‌ನಲ್ಲಿ ಪ್ರಥಮ ಮತ್ತು 50 ಮೀಟರ್ ಬಟರ್‌ಫ್ಲೈನಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದಾರೆ. ದುರ್ಗೇಶ್ 200 ಮೀಟರ್ ಐಎಮ್‌ನಲ್ಲಿ ದ್ವಿತೀಯ, 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಮತ್ತು 50 ಮೀಟರ್ ಫ್ರೀಸ್ಟೈಲ್‌ನಲ್ಲಿ ತೃತೀಯ ಸ್ಥಾನ ಗಳಿಸಿದರೆ, ರಿತ್ವಿಜ್ 100 ಮೀಟರ್ ಹಾಗೂ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ದ್ವಿತೀಯ ಮತ್ತು 50 ಮೀಟರ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ವಿಜೇತ ಕ್ರೀಡಾಪಟುಗಳನ್ನು ಮತ್ತು ರಾಜ್ಯಮಟ್ಟಕ್ಕೆ ಆಯ್ಕೆಯಾದ ಈಜುಪಟುಗಳನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಶ್ಲಾಘಿಸಿ ಅಭಿನಂದಿಸಿದ್ದಾರೆ.