ಮಂಗಳೂರು: ಸಮಾಜದಲ್ಲಿ ಕಷ್ಟದಲ್ಲಿರುವವರಿಗೆ ನನ್ನ ಇಳಿ ವಯಸ್ಸಿನವರೆಗೂ ನನ್ನಿಂದಾಗುವ ಸಹಾಯ ಮಾಡಿದ್ದೇನೆ ಎಂಬ ಆತ್ಮತೃಪ್ತಿ ನನಗಿದೆ. "ಕೊಟ್ಟದ್ದು ತನಗೆ, ಬಚ್ಚಿಟ್ಟದ್ದು ಪರರಿಗೆ" ಎಂಬ ಮಾತಿನಂತೆ ನಾನು ಕಾರ್ಯನಿರ್ವಹಿಸುತ್ತಾ ಬಂದಿದ್ದೇನೆ. ಮುಂದೆಯೂ ಸಮಾಜಮುಖಿ ಕೆಲಸಗಳಿಗೆ ಸ್ಪಂದಿಸುತ್ತೇನೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಪೂರ್ವಾಧ್ಯಕ್ಷರಾದ ಹರಿಕೃಷ್ಣ ಪುನರೂರು ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ವೆಬ್‌ಸೈಟ್ (www.dkwju.com) ಅನ್ನು ಸ ಅನಾವರಣಗೊಳಿಸಿ ಅವರು ಮಾತನಾಡಿದರು.
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಕನ್ನಡದ ಕೆಲಸ ಮಾಡಿರುವುದರ ಜೊತೆಗೆ, ಮನೆಯಿಲ್ಲದವರಿಗೆ ಸರ್ಕಾರದ ನೆರವಿನಿಂದ ಮನೆ ನಿರ್ಮಿಸಲು ಸಹಾಯ ಮಾಡಿದ್ದೇನೆ. ಅಲ್ಲದೆ, ನಾನೇ ಸ್ವತಃ 101 ಮನೆಗಳನ್ನು ಉಚಿತವಾಗಿ ನಿರ್ಮಿಸಿಕೊಟ್ಟಿದ್ದೇನೆ. ಖ್ಯಾತ ನೇತ್ರತಜ್ಞ ಡಾ. ಮೋದಿ ಅವರ ಮೂಲಕ ಸಾಕಷ್ಟು ಕಣ್ಣಿನ ತಪಾಸಣೆ ಶಿಬಿರಗಳನ್ನು ನಡೆಸಿ, ಆರ್ಥಿಕವಾಗಿ ಸಹಾಯ ಮಾಡಲು ಸಾಧ್ಯವಾಗಿದೆ. ಊರಿನಲ್ಲಿ ಸರ್ಕಾರಿ ಕನ್ನಡ ಶಾಲೆ ನಿರ್ಮಿಸಿದ ತೃಪ್ತಿಯೂ ಇದೆ ಎಂದರು.
ಈ ರೀತಿಯ ಸಮಾಜ ಸೇವಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ನನ್ನ ಪತ್ನಿಯ ಸಹಕಾರವೂ ದೊರೆತಿದೆ. ದೇವರು ಆರೋಗ್ಯ ನೀಡಿದ್ದಾರೆ. ಆರೋಗ್ಯ ಚೆನ್ನಾಗಿರುವವರೆಗೆ ಈ ರೀತಿಯ ಚಟುವಟಿಕೆಗಳನ್ನು ನಡೆಸುವ ಇಚ್ಛೆಯಿದೆ ಎಂದು ತಿಳಿಸಿದರು.
ಮಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ ಮಾತನಾಡಿ, ಹರಿಕೃಷ್ಣ ಪುನರೂರು ಅವರು ಸುದೀರ್ಘಕಾಲ ಸಮಾಜದ ವಿವಿಧ ಸೇವಾ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಅವರ ಬಗ್ಗೆ ಈಗಾಗಲೇ ಒಂದು ಕೃತಿ ಬಿಡುಗಡೆಯಾಗಿದ್ದು, ಅದರಲ್ಲಿ ಸಾಕಷ್ಟು ವಿವರಗಳಿವೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪುಷ್ಪರಾಜ್ ಬಿ.ಎನ್. ವಹಿಸಿದ್ದರು. ದಕ್ಷಿಣ ಕನ್ನಡ ಪತ್ರಕರ್ತರ ಗೃಹ ನಿರ್ಮಾಣ ಸಹಕಾರಿ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧಿಕಾರಿ ವಿಜಯ ಕೋಟ್ಯಾನ್ ಪಡು ಮತ್ತು ಗೃಹ ನಿರ್ಮಾಣ ಸಹಕಾರಿ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ರಾಜೇಶ್ ಪೂಜಾರಿ ಕೆ. ವಂದಿಸಿದರು.