ಮಂಗಳೂರು: ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ಹಿಂದುಳಿದ ವರ್ಗಗಳ ಹಕ್ಕುಗಳನ್ನು ಬಲಪಡಿಸುವ ಉದ್ದೇಶದಿಂದ ಅಹಿಂದ ಚಳುವಳಿಯ ವತಿಯಿಂದ ಪ್ರಮುಖ ಬೇಡಿಕೆಗಳ ಕುರಿತು ಮನವಿ ಸಲ್ಲಿಸಲಾಗಿದೆ ಎಂದು ಅಹಿಂದ ಚಳುವಳಿಯ ದಕ್ಷಿಣ ಕನ್ನಡ ಜಿಲ್ಲೆಯ ಮುಖ್ಯ ಸಂಚಾಲಕರಾದ ಸಿರಾಜ್ ಬಜ್ಪೆ ತಿಳಿಸಿದರು. ನಗರ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,
ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮುಂದಿಡಬೇಕಾದ ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲಾಯಿತು.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಅವಧಿಯಲ್ಲಿ ರಚನೆಯಾದ ಕಾಂತರಾಜ್ ಅವರ ಅಧ್ಯಕ್ಷತೆಯ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ, ನಂತರ ಜಯಪ್ರಕಾಶ್ ಹೆಗ್ಡೆ ಅವರ ಅಧ್ಯಕ್ಷತೆಯ ಆಯೋಗ ಹಾಗೂ ಮಧುಸೂದನ್ ನಾಯಕ್ ಅವರ ಅಧ್ಯಕ್ಷತೆಯ ಆಯೋಗ ನಡೆಸಿರುವ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗಳ ವರದಿಗಳನ್ನು ಇನ್ನು ವಿಳಂಬ ಮಾಡದೆ ಸಾರ್ವಜನಿಕವಾಗಿ ಪ್ರಕಟಿಸಬೇಕು ಎಂದು ಅಹಿಂದ ಚಳುವಳಿಯು ಒತ್ತಾಯಿಸಿದೆ. ಈ ಸಮೀಕ್ಷಾ ವರದಿಗಳಲ್ಲಿ ವಿವಿಧ ಸಮುದಾಯಗಳ ಅಂಕಿ-ಅಂಶಗಳು ಲಭ್ಯವಿದ್ದು, ಕಲ್ಯಾಣ ಯೋಜನೆಗಳು ಹಾಗೂ ಮೀಸಲಾತಿಯನ್ನು ವೈಜ್ಞಾನಿಕವಾಗಿ ರೂಪಿಸಲು ಇದರಿಂದ ಸಹಾಯವಾಗಲಿದೆ ಎಂದು ತಿಳಿಸಲಾಯಿತು.
ಅದೇ ರೀತಿ, ಕೇಂದ್ರ ಸರ್ಕಾರದ ನರೇಂದ್ರ ಮೋದಿ ನೇತೃತ್ವದ ಸರ್ಕಾರವು ದೇಶಾದ್ಯಂತ ಜಾತಿಗಣತಿ ಹಾಗೂ ಜನಗಣತಿಯನ್ನು ಶೀಘ್ರವಾಗಿ ನಡೆಸಿ, ಅದರ ದತ್ತಾಂಶವನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಇದರ ಮೂಲಕ ಸಂಪನ್ಮೂಲಗಳು ಮತ್ತು ಸೌಲಭ್ಯಗಳನ್ನು ಅಗತ್ಯವಿರುವ ಸಮುದಾಯಗಳಿಗೆ ನ್ಯಾಯಯುತವಾಗಿ ಹಂಚಿಕೆ ಮಾಡಲು ಸಾಧ್ಯವಾಗುತ್ತದೆ ಎಂದು ಅಹಿಂದ ಚಳುವಳಿ ಆಗ್ರಹಿಸಿದೆ. ಈ ಬೇಡಿಕೆಗಳನ್ನು ಈಡೇರಿಸುವಂತೆ ಕೋರಿ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯದ ಮುಖ್ಯಮಂತ್ರಿಗಳು ಹಾಗೂ ದೇಶದ ಪ್ರಧಾನ ಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ದೀಪಕ್ ಪೆರ್ಮುದೆ, ನಿಶಾಕ್ ಕರಾವಳಿ, ವಸಂತ್, ಮನೀಶ್, ಮೀನಾ ಟೆಲ್ಲಿಸ್ ಮತ್ತು ವಿಲ್ಪ್ರೆಡ್ ಉಪಸ್ಥಿತರಿದ್ದರು.