ಪುತ್ತೂರು : ಪುತ್ತೂರಿನ ದರ್ಬೆಯಲ್ಲಿ ಆಗಸ್ಟ್ 21ರಂದು ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ಅವರು ಆಗಸ್ಟ್ 23ರಂದು ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಂಗಡಿಯೊಂದರಲ್ಲಿದ್ದ ಲ್ಯಾಮಿನೇಷನ್ ಯಂತ್ರದ ತಾಂತ್ರಿಕ ಸಮಸ್ಯೆಯಿಂದ ದಾಖಲೆಯೊಂದು ಹಾನಿಗೊಳಗಾದಾಗ ಈ ವಿವಾದ ಶುರುವಾಗಿದ್ದು, ಗ್ರಾಹಕರು ಅಂಗಡಿ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿದ್ದಾರೆ. ಈ ವೇಳೆ ಅಂಗಡಿ ಮಾಲಕಿ ಅಂಜನಾ ಪೈ ಗಲಾಟೆಯಲ್ಲಿ ಭಾಗಿಯಾಗಿದ್ದರೆ, ಮಧ್ಯಪ್ರವೇಶಿಸಿದ ಸುದರ್ಶನ್ ಪೈ ವೀಡಿಯೋ ಚಿತ್ರೀಕರಿಸಲು ಯತ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ್ದಾನೆ.
ಸುದರ್ಶನ್ ಪೈಯನ್ನು ಪೊಲೀಸ್ ವಶಕ್ಕೆ ಪಡೆದ ನಂತರವೂ ಕೆಲವು ವ್ಯಕ್ತಿಗಳು ಅತಿರೇಕದಿಂದ ವರ್ತಿಸಿದ್ದು, ನೌಶಾದ್ ಎಂಬಾತ ಪೊಲೀಸ್ ವಾಹನದೊಳಗೆ ಇಣುಕಿ ಕೃತ್ಯವೆಸಗಿರುವುದು ಕಂಡುಬಂದಿದೆ. ಈ ಪ್ರಕರಣದಲ್ಲಿ ಭಾಗಿಯಾದ ಸುದರ್ಶನ್ ಪೈ ವಿರುದ್ಧ ಕೊಲೆ ಯತ್ನ ಹಾಗೂ ಡ್ರಗ್ಸ್ ದಂಧೆಗೆ ಸಂಬಂಧಿಸಿದ ಹಳೆಯ ಪ್ರಕರಣಗಳಿದ್ದರೆ, ನೌಶಾದ್ ಮತ್ತು ಸದಾಶಿವ ಪೈ ವಿರುದ್ಧ ರಸ್ತೆ ಜಗಳದಲ್ಲಿ ಹಲ್ಲೆ ನಡೆಸಿದ ಹಳೆಯ ಪ್ರಕರಣಗಳಿವೆ. ಅಲ್ಲದೆ, ಗಲಾಟೆ ವೇಳೆ ನೆರೆದಿದ್ದ ಇತರ ಇಬ್ಬರು ವ್ಯಕ್ತಿಗಳ ಮೇಲೆಯೂ ತಲಾ ಒಂದೊಂದು ಹಳೆಯ ಪ್ರಕರಣಗಳಿವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.
ಘಟನೆಗೆ ಸಂಬಂಧಿಸಿದ ಸಿಸಿಟಿವಿ ದೃಶ್ಯಾವಳಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವೀಡಿಯೋಗಳನ್ನು ಪರಿಶೀಲಿಸಲಾಗುತ್ತಿದ್ದು, ಎರಡೂ ಕಡೆಯಿಂದ ಬಂದಿರುವ ದೂರುಗಳ ತನಿಖೆ ನಡೆಯುತ್ತಿದೆ. ಯಾವುದೇ ವ್ಯಕ್ತಿ ಅಪರಾಧ ಎಸಗಿರುವುದು ಕಂಡುಬಂದಾಗ ಧರ್ಮ ಅಥವಾ ಸಮುದಾಯವನ್ನು ಲೆಕ್ಕಿಸದೆ, ಸತ್ಯಾಸತ್ಯತೆ ಮತ್ತು ಸಾಕ್ಷ್ಯಾಧಾರಗಳ ಮೇಲೆ ಮಾತ್ರ ಕಾನೂನು ಕ್ರಮ ಕೈಗೊಳ್ಳಲಾಗುವುದು ಹಾಗೂ ಕೋಮು ಅಥವಾ ಸಾರ್ವಜನಿಕ ಒತ್ತಡಕ್ಕೆ ಮಣಿದು ಬಂಧನ ಮಾಡುವುದಿಲ್ಲ ಎಂದು ಎಸ್ಪಿ ಸ್ಪಷ್ಟಪಡಿಸಿದ್ದಾರೆ. ಘಟನೆಗೆ ಕೋಮು ಬಣ್ಣ ನೀಡಿ ದ್ವೇಷ ಹರಡಲು ಯತ್ನಿಸುವವರ ವಿರುದ್ಧ ಹಾಗೂ ಬಂದ್‌ಗೆ ಕರೆ ನೀಡಿದರೆ ಕಾನೂನು ಕ್ರಮ ಜರುಗಿಸಲಾಗುವುದು ಎಂದಿರುವ ಅವರು, ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕೆಂದು ಮನವಿ ಮಾಡಿದ್ದಾರೆ.