ಮಂಗಳೂರು: ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಡಿಜಿಟಲ್ ಜಗತ್ತಿನಲ್ಲಿ ದಾಖಲಿಸುವ ಮಹತ್ವದ 'ತುಳು ವಿಕಿಪೀಡಿಯಾ' ತನ್ನ ಲೈವ್ ಆವೃತ್ತಿಯ 10ನೇ ವರ್ಷದ ಸಂಭ್ರಮದಲ್ಲಿದ್ದು, ಸೆಪ್ಟೆಂಬರ್ 12 ಮತ್ತು 13ರಂದು ಮಂಗಳೂರಿನಲ್ಲಿ ಎರಡು ದಿನಗಳ ವಿಶೇಷ ದಶಮಾನೋತ್ಸವ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಡಾ.ವಿಶ್ವನಾಥ ಬದಿಕಾನ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು,
2008ರಲ್ಲಿ ಆರಂಭವಾಗಿ, 2016ರ ಆಗಸ್ಟ್ 6ರಂದು ಅಧಿಕೃತವಾಗಿ ಲೈವ್ ಆವೃತ್ತಿಯಾದ ತುಳು ವಿಕಿಪೀಡಿಯಾ ಇಂದು 23ನೇ ಭಾರತೀಯ ಭಾಷೆಯಾಗಿ ಹೊರಹೊಮ್ಮಿದೆ. ಪ್ರಸ್ತುತ ವಿವಿಧ ಕ್ಷೇತ್ರಗಳಿಗೆ ಸಂಬಂಧಿಸಿದ 3,800ಕ್ಕೂ ಹೆಚ್ಚು ಲೇಖನಗಳನ್ನು ಹೊಂದಿದ್ದು, ಕೆಲವೇ ಸ್ವಯಂಸೇವಕರ ನಿರಂತರ ಪರಿಶ್ರಮದಿಂದ ಬೆಳೆದುಬಂದಿದೆ. ಡಾ. ಯು.ಬಿ. ಪವನಜ ಸೇರಿದಂತೆ ಹಲವು ವಿದ್ವಾಂಸರು ಹಾಗೂ ಸ್ವಯಂಸೇವಕರ ಮಾರ್ಗದರ್ಶನ ಇದರ ಹಿಂದಿದೆ.
ಮಂಗಳೂರಿನಲ್ಲಿ ನಡೆಯಲಿರುವ ಈ ದಶಮಾನೋತ್ಸವ ಸಮಾರಂಭದಲ್ಲಿ ವಿಕಿಮೀಡಿಯನ್ನರು, ವಿದ್ಯಾರ್ಥಿಗಳು, ಶಿಕ್ಷಣತಜ್ಞರು ಮತ್ತು ಭಾಷಾ ಪ್ರೇಮಿಗಳು ಭಾಗವಹಿಸಲಿದ್ದಾರೆ. ಡಾ. ಮೋಹನ ಆಳ್ವ, ಡಾ. ಕೆ.ಪಿ. ರಾವ್ ಹಾಗೂ ತಾರಾನಾಥ ಗಟ್ಟಿ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ತುಳು ಭಾಷೆಯ ಡಿಜಿಟಲ್ ಜ್ಞಾನಸಂಪತ್ತನ್ನು ವಿಸ್ತರಿಸುವುದು ಮತ್ತು ಯುವ ಪೀಳಿಗೆಯನ್ನು ಕೊಡುಗೆದಾರರನ್ನಾಗಿ ಮಾಡುವುದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದರು.
ಪತ್ರಿಕಾಗೋಷ್ಟಿಯಲ್ಲಿ ಡಾ.ಕಿಶೋರ್ ರೈ, ಭರತೇಶ್ ಅಲಸಂಡೆ ಮಜಲು ಮತ್ತಿತರರು ಉಪಸ್ಥಿತರಿದ್ದರು.