ಉಜಿರೆ: ಆಧುನಿಕ ಜಗತ್ತಿನ ಬದಲಾವಣೆಗಳಿಗೆ ತಕ್ಕಂತೆ ಹೊಸ ತಂತ್ರಜ್ಞಾನ ಹಾಗೂ ಹೊಸ ಆಲೋಚನೆಗಳನ್ನು ಉದ್ಯಮದಲ್ಲಿ ಅಳವಡಿಸಿಕೊಂಡು, ಪ್ರಾಮಾಣಿಕತೆ ಮತ್ತು ಗುಣಮಟ್ಟದೊಂದಿಗೆ ಮುನ್ನಡೆದರೆ ಯಶಸ್ಸು ಖಚಿತ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ತಿಳಿಸಿದರು.
ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಉಜಿರೆಯ ರುಡ್‌ಸೆಟ್ ಸಂಸ್ಥೆಯ 'ಅಸಿಸ್ಟೆಂಟ್ ಬುಕ್‌ಕೀಪರ್' ಹಾಗೂ 'ವಸ್ತ್ರಚಿತ್ರಕಲಾ–ಲಘು ಉದ್ಯಮಿ' ತರಬೇತಿ ಶಿಬಿರಾರ್ಥಿಗಳನ್ನು ಭೇಟಿಯಾಗಿ ಆಶೀರ್ವದಿಸಿ ಮಾತನಾಡಿದ ಅವರು, ಸಂಸ್ಥೆಯಲ್ಲಿ ಪಡೆಯುತ್ತಿರುವ ತರಬೇತಿಯನ್ನು ಸಮರ್ಪಕವಾಗಿ ಬಳಸಿಕೊಂಡು ಸ್ವಉದ್ಯೋಗದ ಮೂಲಕ ಪ್ರತಿಯೊಬ್ಬರೂ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಕಲಿತ ಕೌಶಲ್ಯವನ್ನು ಕೇವಲ ಸ್ವಂತ ಉದ್ಯೋಗಕ್ಕೆ ಸೀಮಿತಗೊಳಿಸದೆ, ಇತರರಿಗೂ ಉದ್ಯೋಗಾವಕಾಶ ಕಲ್ಪಿಸುವ ಉದ್ಯಮಿಗಳಾಗಿ ಬೆಳೆಯಬೇಕು ಎಂದು ಶಿಬಿರಾರ್ಥಿಗಳಿಗೆ ಆಶೀರ್ವದಿಸಿ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ರುಡ್‌ಸೆಟ್ ಸಂಸ್ಥೆಯ ನಿರ್ದೇಶಕರಾದ ಸುನಿಲ್ ಜಿ. ನಾಯಕ್, ಹಿರಿಯ ಉಪನ್ಯಾಸಕರಾದ ಕರುಣಾಕರ ಜೈನ್, ಅತಿಥಿ ಉಪನ್ಯಾಸಕರಾದ ಸಚಿನ್, ರಶ್ಮಿ ರಾಘವೇಂದ್ರ ಹಾಗೂ ಸುರೇಶ ಗೌಡ ಉಪಸ್ಥಿತರಿದ್ದರು.