ಸುಬ್ರಮಣ್ಯ: ರೋಗ ಬಂದಮೇಲೆ ಅದಕ್ಕೆ ಔಷಧಿ ತಗೊಳ್ಳೋದಕ್ಕಿಂತ ಮುಂಚೆ ರೋಗ ಬರದೆ ಹಾಗೆ ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವುದು ಅಗತ್ಯ. ಗ್ರಾಮೀಣ ಭಾಗದ ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡುವುದರೊಂದಿಗೆ ಸಮೀಪದ ಶಾಲಾ ಕಾಲೇಜುಗಳು ಹಾಗೂ ಸಂಘ ಸಂಸ್ಥೆಗಳಿಗೆ ಆರೋಗ್ಯ ಶಿಕ್ಷಣ ಮಾಹಿತಿ ಕೂಡ ನೀಡಬೇಕು. ಈ ನಿಟ್ಟಿನಲ್ಲಿ ನುರಿತ ಅನುಭವಿ ವೈದ್ಯರಾದ ಡಾ. ಗಾನಶ್ರೀ ಅವರ ಸ್ವಾಸ್ಥ್ಯ ಆರೋಗ್ಯ ಕ್ಲಿನಿಕ್ ಬಾಳಿಲದಂತಹ ಗ್ರಾಮೀಣ ಪ್ರದೇಶದಲ್ಲಿ ತೆರೆದಿರುವುದು ಅತಿ ಅಗತ್ಯವಾಗಿದೆ ಹಾಗೂ ಸಂತಸ ತಂದಿದೆ ಎಂದು ಪುತ್ತೂರು ಮಹಾವೀರ ಮೆಡಿಕಲ್ ಸೆಂಟರ್ ನ ಆಡಳಿತ ನಿರ್ದೇಶಕ ಹಾಗೂ ಖ್ಯಾತ ವೈದ್ಯರಾದ ಡಾ. ಸುರೇಶ ಪುತ್ತೂರಾಯ ಅವರು ನುಡಿದರು.
ಅವರು ಬಾಳಿದ ಸೇವಾ ಸಹಕಾರಿ ಸಂಘದ ಕಟ್ಟಡದ ಪ್ರಥಮ ಮಹಡಿಯಲ್ಲಿ ನೂತನವಾಗಿ ಆರಂಭಿಸಲಾದ ಸ್ವಾಸ್ಥ್ಯ ಆರೋಗ್ಯ ಕ್ಲಿನಿಕನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಬಾಳಿನ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಅಜಿತ್ ರಾವ್ ಉಪಸ್ಥಿತರಿದ್ದು ಶುಭ ಹಾರೈಸಿದರು. ಸೊಸೈಟಿ ಉಪಾಧ್ಯಕ್ಷ ಶ್ರೀಹರ್ಷ, ನಿರ್ದೇಶಕರಾದ ರವೀಂದ್ರ ರೈ, ಪ್ರಭಾಕರ್ ಆಳ್ವ ಶ್ರೀಮತಿ ಸವಿತಾ, ಮತ್ತು ನಿವೃತ್ತ ಉಪನ್ಯಾಸಕ ವಿಶ್ವನಾಥ ನಡುತೋಟ ವೇದಿಕೆಯಲ್ಲಿ ಉಪಸ್ಥಿತರಿದ್ದರು.