image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ಸಂಸದ ಕ್ಯಾ. ಚೌಟ ಪ್ರಯತ್ನದ ಫಲ

ಮಂಗಳೂರು ರೈಲು ಜಾಲ ಮೈಸೂರು ವಿಭಾಗಕ್ಕೆ ಸೇರ್ಪಡೆ: ಸಂಸದ ಕ್ಯಾ. ಚೌಟ ಪ್ರಯತ್ನದ ಫಲ

ಮಂಗಳೂರು : ಮಂಗಳೂರು ಭಾಗದ ರೈಲ್ವೆ ಜಾಲವನ್ನು ದಕ್ಷಿಣ ರೈಲ್ವೆ ವಲಯದ ಪಾಲ್ಘಾಟ್ ವಿಭಾಗದಿಂದ ಪ್ರತ್ಯೇಕಿಸಿ, ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗಕ್ಕೆ ಸೇರ್ಪಡೆಗೊಳಿಸಲು ರೈಲ್ವೆ ಸಚಿವಾಲಯವು ಒಪ್ಪಿಗೆ ನೀಡಿದೆ. ಈ ಸಂಬಂಧ ಶೀಘ್ರದಲ್ಲೇ ಗೆಜೆಟೆಡ್ ನೋಟಿಫಿಕೇಶನ್ ಹೊರಬೀಳಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಜನರ ಬಹುವರ್ಷಗಳ ಬೇಡಿಕೆ ಈಡೇರಿದೆ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್‌ ಚೌಟ ತಿಳಿಸಿದ್ದಾರೆ.

ಮಂಗಳೂರು ಭಾಗದ ರೈಲ್ವೆ ಜಾಲವು ದಕ್ಷಿಣ ರೈಲ್ವೆಯ ಪಾಲ್ಘಾಟ್‌ ವಿಭಾಗ ಹಾಗೂ ನೈಋತ್ಯ ರೈಲ್ವೆಯ ಮೈಸೂರು ವಿಭಾಗಗಳ ನಡುವೆ ಹಂಚಿಕೆಯಾಗಿದ್ದರಿಂದ ಮೂಲಸೌಕರ್ಯ ಅಭಿವೃದ್ಧಿ, ಹೊಸ ರೈಲುಗಳ ಅಳವಡಿಕೆ ಸೇರಿದಂತೆ ಅನೇಕ ಆಡಳಿತಾತ್ಮಕ ಸವಾಲುಗಳು ಎದುರಾಗುತ್ತಿದ್ದವು. 2024ರಲ್ಲಿ ಸಂಸದರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಈ ಸಮಸ್ಯೆಗೆ ಆದ್ಯತೆ ನೀಡಿದ ಕ್ಯಾ. ಚೌಟ ಅವರು, ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರ ಗಮನಕ್ಕೆ ತಂದು ಲೋಕಸಭೆಯಲ್ಲೂ ಧ್ವನಿ ಎತ್ತಿದ್ದರು. ಕಳೆದ ಎರಡು ವರ್ಷಗಳ ನಿರಂತರ ಪ್ರಯತ್ನ ಹಾಗೂ ಫಾಲೋಅಪ್‌ನ ಫಲವಾಗಿ ಈಗ ಕೇಂದ್ರ ಸರ್ಕಾರದಿಂದ ಈ ಐತಿಹಾಸಿಕ ತೀರ್ಮಾನ ಹೊರಬಿದ್ದಿದೆ.

ಈ ಬದಲಾವಣೆಯಿಂದ ಮಂಗಳೂರು ರೈಲ್ವೆ ವ್ಯಾಪ್ತಿಯ ಆಡಳಿತಾತ್ಮಕ ಗೊಂದಲಗಳು ನಿವಾರಣೆಯಾಗಿ ಅಭಿವೃದ್ಧಿ ವಿಚಾರಗಳಲ್ಲಿ ತ್ವರಿತ ನಿರ್ಧಾರಗಳು ಸಾಧ್ಯವಾಗಲಿವೆ. ಇಲಾಖೆಗಳ ನಡುವಿನ ಸಮನ್ವಯತೆ ಹೆಚ್ಚಿ, ಪ್ರಯಾಣಿಕರ ಕುಂದುಕೊರತೆಗಳ ಶೀಘ್ರ ವಿಲೇವಾರಿ ಹಾಗೂ ಕರಾವಳಿ ಭಾಗದ ರೈಲ್ವೆ ಮೂಲಸೌಕರ್ಯ ವಿಸ್ತರಣೆಗೆ ಇದು ಸಹಕಾರಿಯಾಗಲಿದೆ. ಈ ಮಹತ್ವದ ನಿರ್ಧಾರ ಕೈಗೊಂಡ ಪ್ರಧಾನಮಂತ್ರಿ ನರೇಂದ್ರ ಮೋದಿ, ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಜಿಲ್ಲೆಯ ಜನರ ಪರವಾಗಿ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ