ಸುರತ್ಕಲ್: ಮೀಲಾದುನ್ನಬಿ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿ (ಮೊಸರುಕುಡಿಕೆ) ಹಬ್ಬಗಳ ಹಿನ್ನೆಲೆಯಲ್ಲಿ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಗುರುವಾರ ಸಂಜೆ ವಿವಿಧ ಸಮುದಾಯಗಳ ಮುಖಂಡರು ಹಾಗೂ ಧಾರ್ಮಿಕ ಮುಖಂಡರ ಶಾಂತಿ ಸಭೆ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ. ಮಾತನಾಡಿ, ಧಾರ್ಮಿಕ ಹಬ್ಬಗಳನ್ನು ಸಂತೋಷ, ಸೌಹಾರ್ದತೆ ಮತ್ತು ಸಹೋದರತ್ವದಿಂದ ಆಚರಿಸಬೇಕು. ಯಾವುದೇ ಸಮುದಾಯಕ್ಕೆ ತೊಂದರೆ ಅಥವಾ ಮನಸ್ಸಿಗೆ ನೋವು ಉಂಟಾಗುವ ರೀತಿಯಲ್ಲಿ ಆಚರಣೆಗಳು ನಡೆಯಬಾರದು ಎಂದು ಸಲಹೆ ನೀಡಿದರು.
ಪಿಎಸ್ಐ ರಘು ನಾಯ್ಕ್ ಮಾತನಾಡಿ, ಹಬ್ಬಗಳ ಸಂದರ್ಭದಲ್ಲಿ ಸಮುದಾಯದ ಮುಖಂಡರು ಯುವಕರ ಚಟುವಟಿಕೆಗಳ ಮೇಲೆ ವಿಶೇಷ ನಿಗಾ ವಹಿಸಬೇಕು. ಯಾವುದೇ ಸಮಸ್ಯೆ ಅಥವಾ ಭಿನ್ನಾಭಿಪ್ರಾಯ ಎದುರಾದಲ್ಲಿ ಸಾರ್ವಜನಿಕರು ಸ್ವತಃ ಕಾನೂನು ಕೈಗೆತ್ತಿಕೊಳ್ಳದೆ ಬೀಟ್ ಪೊಲೀಸರು ಅಥವಾ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ತಿಳಿಸಿದರು. ಹಬ್ಬದ ಕಾರ್ಯಕ್ರಮಗಳ ಆಯೋಜಕರು ಕಾನೂನು ಚೌಕಟ್ಟಿನೊಳಗೆ ಹಾಗೂ ಸಾರ್ವಜನಿಕರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಕಾರ್ಯಕ್ರಮಗಳನ್ನು ನಡೆಸಬೇಕು ಎಂದು ಪೊಲೀಸರು ಸೂಚಿಸಿದರು. ನಿಯಮ ಉಲ್ಲಂಘಿಸಿ ಶಾಂತಿ ಕದಡುವ ಅಥವಾ ಸಾರ್ವಜನಿಕರಿಗೆ ತೊಂದರೆ ನೀಡುವ ಕುರಿತು ದೂರುಗಳು ಬಂದಲ್ಲಿ ಯಾವುದೇ ಮುಲಾಜಿಲ್ಲದೆ ಸಂಬಂಧಪಟ್ಟ ಆಯೋಜಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ವಿವಿಧ ಧಾರ್ಮಿಕ ಕ್ಷೇತ್ರಗಳ ಅಧ್ಯಕ್ಷರು, ಮೊಸರುಕುಡಿಕೆ ಉತ್ಸವದ ಆಯೋಜಕರು, ಸಾಮಾಜಿಕ ಹಾಗೂ ಧಾರ್ಮಿಕ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಸ್ಥಳೀಯ ಮುಖಂಡರು ಹಾಗೂ ಹಿರಿಯರು ಭಾಗವಹಿಸಿ, ಹಬ್ಬಗಳನ್ನು ಶಾಂತಿಯುತ ಮತ್ತು ಸೌಹಾರ್ದಯುತವಾಗಿ ಆಚರಿಸಲು ಪೊಲೀಸ್ ಇಲಾಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಭರವಸೆ ನೀಡಿದರು.