ಮಂಗಳೂರು: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ ಜನಪರ ಚಿಂತನೆ ಮತ್ತು ಆದರ್ಶಗಳನ್ನು ಇಂದಿನ ಪೀಳಿಗೆಗೆ ಪರಿಚಯಿಸುವ ಅಗತ್ಯವಿದೆ ಎಂದು ಮಾಜಿ ಸಚಿವ ಬಿ. ರಮಾನಾಥ ರೈ ಹೇಳಿದರು. ರಾಜೀವ್ ಗಾಂಧಿಯವರು ಯುವಶಕ್ತಿಗೆ ಆದ್ಯತೆ ನೀಡಿ, ತಂತ್ರಜ್ಞಾನ ಹಾಗೂ ಆಧುನಿಕ ಭಾರತದ ನಿರ್ಮಾಣಕ್ಕೆ ಹೊಸ ದಿಕ್ಕು ನೀಡಿದ ದೂರದೃಷ್ಟಿಯ ನಾಯಕ. ದೇಶದ ಅಭಿವೃದ್ಧಿ ಮತ್ತು ಯುವಕರ ಭವಿಷ್ಯದ ಬಗ್ಗೆ ಅವರು ಕಂಡ ಕನಸುಗಳು ಇಂದಿಗೂ ಪ್ರಸ್ತುತವಾಗಿವೆ ಎಂದು ರೈ ಹೇಳಿದರು. ಅದೇ ರೀತಿ, ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ಪರವಾಗಿ ಐತಿಹಾಸಿಕ ಹೆಜ್ಜೆಗಳನ್ನು ಇಟ್ಟ ಜನನಾಯಕ. ಭೂ ಸುಧಾರಣೆ ಸೇರಿದಂತೆ ಹಲವು ಜನಪರ ಕ್ರಮಗಳ ಮೂಲಕ ಬಡವರು, ಹಿಂದುಳಿದವರು ಮತ್ತು ಶೋಷಿತ ವರ್ಗಗಳಿಗೆ ಸಾಮಾಜಿಕ ಹಾಗೂ ಆರ್ಥಿಕ ಅವಕಾಶಗಳನ್ನು ಕಲ್ಪಿಸಲು ಅವರು ಶ್ರಮಿಸಿದರು ಎಂದು ಅವರು ಸ್ಮರಿಸಿದರು.
“ರಾಜೀವ್ ಗಾಂಧಿ ಪ್ರಾಮಾಣಿಕತೆ, ಆಧುನಿಕತೆ ಮತ್ತು ನವ ಭಾರತದ ಕನಸಿನ ಪ್ರತೀಕ. ದೇವರಾಜ ಅರಸು ಸಾಮಾಜಿಕ ನ್ಯಾಯ, ಸಮಾನತೆ ಮತ್ತು ಶೋಷಿತರ ಧ್ವನಿಯ ಪ್ರತೀಕ. ಇಬ್ಬರು ನಾಯಕರ ಆದರ್ಶಗಳು ಜನಸೇವೆಯ ದಾರಿಯಲ್ಲಿ ನಮಗೆ ಸದಾ ಮಾರ್ಗದರ್ಶನ ನೀಡುತ್ತವೆ” ಎಂದು ರಮಾನಾಥ ರೈ ಹೇಳಿದರು. ಇಂದಿನ ರಾಜಕೀಯದಲ್ಲಿ ಅಧಿಕಾರಕ್ಕಿಂತ ಜನಸೇವೆ, ವಿಭಜನೆಗಿಂತ ಸೌಹಾರ್ದತೆ ಹಾಗೂ ಅಸಮಾನತೆಗಿಂತ ಸಾಮಾಜಿಕ ನ್ಯಾಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗಿದೆ. ರಾಜೀವ್ ಗಾಂಧಿ ಮತ್ತು ದೇವರಾಜ ಅರಸರ ಆಶಯಗಳನ್ನು ಮುಂದುವರಿಸುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಅವರು ಅಭಿಪ್ರಾಯಪಟ್ಟರು.
ಸಭೆಯಲ್ಲಿ ಕೆಪಿಸಿಸಿ ಮಾಜಿ ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ರಾಮಯ್ಯ ಪೂಜಾರಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜೋಕಿಂಮ್ ಡಿ ಸೌಝ, ವಿಕಾಶ್ ಶೆಟ್ಟಿ, ಅಬ್ದುಲ್ ರವೂಫ್, ಗೀತಾ ಅತ್ತಾವರ, ಶೈಲಾ ರಾಜೇಶ್, ಮಂಜುಳಾ ನಾಯಕ್, ನವೀನ್ ಡಿ ಸೌಝ, ಜಯಶೀಲಾ ಅಡ್ಯಾಂತಯ, ಲುಕ್ಮನ್ ಬಂಟ್ವಾಳ, ಜೆ ಅಬ್ದುಲ್ ಸಲೀಮ್, ಪದ್ಮನಾಬ ರೈ, ಸುಹಾನ್ ಆಳ್ವಾ, ಬೇಬಿ ಕುಂದರ್, ಟಿ ಕೆ ಸುಧೀರ್, ಸಾರಿಕಾ ಪೂಜಾರಿ, ಟಿ ಹೊನ್ನಯ್ಯ, ಡಿ ಕೆ ಅಶೋಕ್, ಸಬೀರ್ ಎಸ್, ಚಂದ್ರಕಲಾ ಜೋಗಿ, ಸುರೇಶ ಪೂಜಾರಿ, ಸಮರ್ಥ್ ಭಟ್, ನ್ಯಾನ್ಸಿ ನೋರನೋ, ಸೌಹಾನ್ ಎಸ್ ಕೆ, ದುರ್ಗಾ ಪ್ರಸಾದ್, ಚಂದ್ರಕಲಾ ರಾವ್ ಮತ್ತು ಪ್ರಶಾಂತ್ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. ಸಭೆಯಲ್ಲಿ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತ ದಿವಂಗತ ಲಕ್ಷ್ಮಣ್ ಶೆಟ್ಟಿ ಅವರಿಗೆ ಸಂತಾಪ ಕೋರಲಾಯಿತು. ಶುಭೋದಯ ಆಳ್ವಾ ಸ್ವಾಗತಿಸಿದರು ಮತ್ತು ಮಾಜಿ ಮೇಯರ್ ಶಶಿದರ್ ಹೆಗ್ಡೆ ವಂದಿಸಿದರು.