ಮಂಗಳೂರು :ಶಕ್ತಿನಗರದ ಕಲಾಂಗಣದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯು ಮಾಂಡ್ ಸೊಭಾಣ್ ಸಹಯೋಗದಲ್ಲಿ ಆಯೋಜಿಸಿದ್ದ 35ನೇ ಕೊಂಕಣಿ ಮಾನ್ಯತಾ ದಿನಾಚರಣೆಯು ಬುಧವಾರದಂದು ವಿಭಿನ್ನ ಹಾಗೂ ಅರ್ಥಪೂರ್ಣ ಕಾರ್ಯಕ್ರಮಗಳೊಂದಿಗೆ ನೆರವೇರಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಕೊಂಕಣಿ ಸಾಹಿತಿ ಡೇವಿಡ್ ಡಿಸೋಜ ವಾಮಂಜೂರು, ಸ್ವಾತಂತ್ರ್ಯಕ್ಕಾಗಿ ಹಿರಿಯರು ಹೇಗೆ ಬಲಿದಾನ ಮಾಡಿದ್ದಾರೋ, ಅದೇ ರೀತಿ ಭಾಷೆಗೆ ಮಾನ್ಯತೆ ತರಲು ನಮ್ಮ ಪೂರ್ವಸೂರಿಗಳು ಅಪಾರ ತ್ಯಾಗ ಮಾಡಿದ್ದಾರೆ ಎಂದರು. ಮಾನ್ಯತೆ ದೊರೆತ ಬಳಿಕ ಕೊಂಕಣಿ ಭಾಷೆ ಸಾಕಷ್ಟು ಬೆಳೆದಿದ್ದು, ಇಂದಿನ ಡಿಜಿಟಲ್ ಮಾಧ್ಯಮ ಯುಗದಲ್ಲಿ ಭಾಷೆಯನ್ನು ಮತ್ತಷ್ಟು ಬೆಳೆಸುವ ದೊಡ್ಡ ಜವಾಬ್ದಾರಿ ಯುವ ಪೀಳಿಗೆಯ ಮೇಲಿದೆ ಎಂದು ಕರೆ ನೀಡಿದರು.
ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಪಿಂಟೊ ಶುಭ ಹಾರೈಸಿ ಮಾತನಾಡಿ, ಇಂದಿನ ಯುವ ಪೀಳಿಗೆಯು ಭಾಷೆಯ ಮಾನ್ಯತೆಗಾಗಿ ಹೋರಾಡುವ ಅಗತ್ಯವಿಲ್ಲ ಬದಲಿಗೆ ಈ ದಿನವನ್ನು ಹಬ್ಬದಂತೆ ಆಚರಿಸಿ, ಮಾನ್ಯತೆಯನ್ನು ಅನುಭವಿಸುವ ಮೂಲಕ ಭಾಷೆಯ ಬಗ್ಗೆ ಅಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಪ್ರಸ್ತಾವಿಕ ನುಡಿಗಳನ್ನಾಡಿದ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಯುವ ಜನತೆಯಲ್ಲಿ ಕೊಂಕಣಿ ಭಾಷೆಯ ಬಗ್ಗೆ ಒಲವು ಮತ್ತು ಅಭಿಮಾನ ಮೂಡಿಸಲು ಅಕಾಡೆಮಿಯು ನಿರಂತರವಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದೆ ಎಂದು ತಿಳಿಸಿದರು. ಅಲ್ಲದೆ, ಜಗತ್ತಿನ ಸಾವಿರಾರು ಭಾಷೆಗಳಲ್ಲಿ ಕೇವಲ 22 ಭಾಷೆಗಳಿಗೆ ಮಾತ್ರ ಸಂವಿಧಾನದ ಮಾನ್ಯತೆ ಸಿಕ್ಕಿದ್ದು, ಅದರಲ್ಲಿ ಕೊಂಕಣಿಯೂ ಒಂದಾಗಿರುವುದು ನಮ್ಮೆಲ್ಲರ ಹೆಮ್ಮೆಯ ವಿಚಾರ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಕಲಾಂಗಣದ ಮಹಾದ್ವಾರದಿಂದ ಆರಂಭಗೊಂಡ ರಂಗುರಂಗಿನ ಮೆರವಣಿಗೆಯು ಎಲ್ಲರ ಗಮನ ಸೆಳೆಯಿತು. ತರುವಾಯ ಮಧುರವಾದ ಕೊಂಕಣಿ ಗೀತೆಗಳನ್ನು ಹಾಡಲಾಯಿತು. ಅಕಾಡೆಮಿ ಸದಸ್ಯ ನವೀನ್ ಲೋಬೊ ಧನ್ಯವಾದ ಸಮರ್ಪಿಸಿದ್ದು, ಸಮರ್ಥ್ ಭಟ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ಹಾಗೂ ಮಾಂಡ್ ಸೊಭಾಣ್‌ನ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.