ಮಂಗಳೂರು: ಕನ್ನಡದ ಖ್ಯಾತ ಕಾದಂಬರಿಕಾರ ಎಸ್. ಎಲ್. ಭೈರಪ್ಪನವರ ಸಾಹಿತ್ಯದಲ್ಲಿ ವೈಚಾರಿಕತೆ, ವೈಜ್ಞಾನಿಕ ಮನೋಭಾವ, ತಾರ್ಕಿಕ ಚಿಂತನೆ ಹಾಗೂ ವಾಸ್ತವದರ್ಶನದ ಆಳವಾದ ಅಭಿವ್ಯಕ್ತಿ ಕಂಡುಬರುತ್ತದೆ ಎಂದು ಕೆನರಾ ಸಂಧ್ಯಾ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಅನಿಲಾ ಕಾಮತ್ ತಿಳಿಸಿದ್ದಾರೆ. ಕೆನರಾ ಕಾಲೇಜು (ಸ್ವಾಯತ್ತ) ಕನ್ನಡ ವಿಭಾಗದ ವತಿಯಿಂದ ಭೈರಪ್ಪನವರ ಜನ್ಮದಿನದ ಅಂಗವಾಗಿ ರತ್ನ ಎಸ್. ಶೆಣೈ ಮೆಮೋರಿಯಲ್ ಹಾಲ್‌ನಲ್ಲಿ ಆಯೋಜಿಸಿದ್ದ ‘ಭೈರಪ್ಪ ನಮನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಭೈರಪ್ಪನವರ ಕಾದಂಬರಿಗಳಲ್ಲಿನ ಸೂಕ್ಷ್ಮತೆ, ವಿದ್ವತ್ಪೂರ್ಣ ದೃಷ್ಟಿಕೋನ ಮತ್ತು ವಾಸ್ತವಿಕ ನೋಟವನ್ನು ವಿದ್ಯಾರ್ಥಿಗಳು ಅರಿತುಕೊಳ್ಳಬೇಕು. ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಅತ್ಯಂತ ಅಗತ್ಯವಿದ್ದು, ಇತರರ ಜೀವನವನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮ ಜೀವನಕ್ಕೂ ಹೆಚ್ಚಿನ ಅರ್ಥ ಕಂಡುಕೊಳ್ಳಲು ಸಾಧ್ಯ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಪ್ರೊ. ದೇಜಮ್ಮ ಎ. ಮಾತನಾಡಿ, ವಿದ್ಯಾರ್ಥಿಗಳು ಕೇವಲ ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವುದಕ್ಕೆ ಸೀಮಿತವಾಗದೆ ಸಾಹಿತ್ಯಾಸಕ್ತಿಯನ್ನು ಬೆಳೆಸಿಕೊಳ್ಳಬೇಕು ಹಾಗೂ ಸಾಹಿತ್ಯದಲ್ಲಿ ಪ್ರತಿಪಾದಿತವಾಗಿರುವ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭದಲ್ಲಿ ವಿದ್ಯಾರ್ಥಿನಿ ಮನಿಷಾ ಎಸ್. ಎಲ್. ಭೈರಪ್ಪನವರ ಸಾಹಿತ್ಯ ಮತ್ತು ವ್ಯಕ್ತಿತ್ವದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವೇದಿಕೆಯಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾದ ವಾಣಿ ಯು. ಎಸ್., ಸಹಾಯಕ ಪ್ರಾಧ್ಯಾಪಕರಾದ ಪ್ರದೀಪ್ ಬಿ. ಹಾಗೂ ಗ್ರಂಥಪಾಲಕಿ ಶ್ರುತಿ ಉಪಸ್ಥಿತರಿದ್ದರು.