image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಆತ್ಮವಿಶ್ವಾಸ, ಅರ್ಹತೆಯೇ ಮಹಿಳಾ ಸಬಲೀಕರಣದ ಬಲ: ಶ್ಯಾಮಲಾ ಎಸ್. ಕುಂದರ್

ಆತ್ಮವಿಶ್ವಾಸ, ಅರ್ಹತೆಯೇ ಮಹಿಳಾ ಸಬಲೀಕರಣದ ಬಲ: ಶ್ಯಾಮಲಾ ಎಸ್. ಕುಂದರ್

ಮೂಡುಬಿದಿರೆ: ಮಹಿಳಾ ಸಬಲೀಕರಣವೆಂದರೆ ಕೇವಲ ಮೀಸಲಾತಿ ಅಥವಾ ಅವಕಾಶಗಳನ್ನು ಪಡೆಯುವುದಲ್ಲ, ಬದಲಿಗೆ ಸ್ವಂತ ಅರ್ಹತೆ ಹಾಗೂ ಆತ್ಮವಿಶ್ವಾಸದಿಂದ ಸಮಾಜದಲ್ಲಿ ತನ್ನದೇ ಆದ ಸ್ಥಾನ ನಿರ್ಮಿಸಿಕೊಳ್ಳುವುದಾಗಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ವಿಶ್ರಾಂತ ಸದಸ್ಯೆ ಶ್ಯಾಮಲಾ ಎಸ್. ಕುಂದರ್ ಹೇಳಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ‘ಸಕ್ಷಮಾ’ ಮಹಿಳಾ ಸಂಘಟನೆ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಿಳೆಯರಲ್ಲಿ ಅಪಾರ ಸಾಮರ್ಥ್ಯವಿದ್ದು, ಅನುಕಂಪದ ಆಧಾರದಲ್ಲಿ ಅವಕಾಶ ಕೋರುವ ಅಗತ್ಯವಿಲ್ಲ. ತಮ್ಮ ಹಕ್ಕುಗಳು, ಆಸ್ತಿಯ ಮೇಲಿನ ಕಾನೂನುಬದ್ಧ ಅರಿವು ಹಾಗೂ ಸಾಮಾಜಿಕ ಜವಾಬ್ದಾರಿಗಳನ್ನು ಪ್ರತಿಯೊಬ್ಬ ಮಹಿಳೆಯೂ ಗ್ರಹಿಸಬೇಕು. ಸಮಾಜದಲ್ಲಿ ನಡೆಯುವ ಅನ್ಯಾಯವನ್ನು ಪ್ರಶ್ನಿಸುವ ಧೈರ್ಯ ಬೆಳೆಸಿಕೊಳ್ಳಬೇಕು ಹಾಗೂ ಬದಲಾವಣೆಯನ್ನು ಸ್ವತಃ ನಮ್ಮಿಂದಲೇ ಆರಂಭಿಸಬೇಕು ಎಂದರು.

ಪ್ರಕೃತಿಯೊಂದಿಗೆ ಹೊಂದಿಕೊಂಡು ಬಾಳುವುದು ಸಂಸ್ಕೃತಿಯಾಗಿದ್ದು, ಪರಿಸರ ಸಂರಕ್ಷಣೆ ಮತ್ತು ದೇಶದ ಸಂವಿಧಾನಕ್ಕೆ ಗೌರವ ನೀಡುವುದು ಎಲ್ಲರ ಕರ್ತವ್ಯ. ಇಂದಿನ ಡಿಜಿಟಲ್ ಯುಗದಲ್ಲಿ ತಂತ್ರಜ್ಞಾನವನ್ನು ಸದುಪಯೋಗಪಡಿಸಿಕೊಂಡು ಮೌಲ್ಯಗಳನ್ನು ಉಳಿಸಿಕೊಳ್ಳಬೇಕು. ತಂತ್ರಜ್ಞಾನವು ಮಹಿಳೆಯರ ಉದ್ಯೋಗ, ಶಿಕ್ಷಣ ಹಾಗೂ ಆಡಳಿತ ಸಾಮರ್ಥ್ಯವನ್ನು ವಿಸ್ತರಿಸುವ ಸಾಧನವಾಗಬೇಕು ಎಂದು ಅವರು ಕರೆ ನೀಡಿದರು.

ರಾಜಕೀಯದಲ್ಲಿ ಮಹಿಳೆಯರಿಗೆ 33 ಶೇಕಡಾ ಮೀಸಲಾತಿ ನೀಡುವ ಪ್ರಯತ್ನಗಳು ಹೊಸ ಆಶಾವಾದ ಮೂಡಿಸಿದ್ದು, ಸಬಲೀಕರಣದ ಪ್ರಗತಿ ಕೇವಲ ನಗರಗಳಿಗೆ ಸೀಮಿತವಾಗದೆ ಗ್ರಾಮೀಣ ಭಾಗಕ್ಕೂ ತಲುಪಬೇಕಿದೆ. ಮಹಿಳಾ ಸಬಲೀಕರಣವು ಇಡೀ ದೇಶದ ಪ್ರಗತಿಗೆ ದಾರಿ ಮಾಡಿಕೊಡುತ್ತದೆ ಎಂದು ಅಭಿಪ್ರಾಯಪಟ್ಟರು. ಕಾರ್ಯಕ್ರಮದಲ್ಲಿ ಆಳ್ವ ಫಾರ್ಮಸಿಯ ಆಡಳಿತಾಧಿಕಾರಿ ಡಾ. ಗ್ರೀಷ್ಮಾ ವಿವೇಕ ಆಳ್ವ, ಸಂಯೋಜಕಿ ಡಾ. ಅರ್ಚನಾ ಪ್ರಭಾತ್ ಹಾಗೂ ಸಂಘಟನೆಯ ಸದಸ್ಯರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ