image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರ‍್ಯಾಗಿಂಗ್ ಮುಕ್ತ ಕ್ಯಾಂಪಸ್ ನಿರ್ಮಾಣ ಎಲ್ಲರ ಹೊಣೆ: ಪಿಎಸ್‌ಐ ಪ್ರತಿಭಾ

ರ‍್ಯಾಗಿಂಗ್ ಮುಕ್ತ ಕ್ಯಾಂಪಸ್ ನಿರ್ಮಾಣ ಎಲ್ಲರ ಹೊಣೆ: ಪಿಎಸ್‌ಐ ಪ್ರತಿಭಾ

ಮೂಡುಬಿದಿರೆ: ರ‍್ಯಾಗಿಂಗ್ ಮುಕ್ತ ಹಾಗೂ ಸುರಕ್ಷಿತ ಕ್ಯಾಂಪಸ್ ನಿರ್ಮಿಸುವುದು ಕೇವಲ ಶಿಕ್ಷಣ ಸಂಸ್ಥೆಯ ಜವಾಬ್ದಾರಿಯಲ್ಲ; ವಿದ್ಯಾರ್ಥಿಗಳು, ಉಪನ್ಯಾಸಕರು, ಪೋಷಕರು ಹಾಗೂ ಸಮಾಜದ ಪ್ರತಿಯೊಬ್ಬರ ಸಾಮೂಹಿಕ ಹೊಣೆಗಾರಿಕೆಯಾಗಿದೆ ಎಂದು ಮೂಡುಬಿದಿರೆ ಪೊಲೀಸ್ ಠಾಣೆಯ ಉಪ ಪೊಲೀಸ್ ನಿರೀಕ್ಷಕಿ (ಪಿಎಸ್‌ಐ) ಪ್ರತಿಭಾ ಹೇಳಿದ್ದಾರೆ. ಇಲ್ಲಿನ ಆಳ್ವಾಸ್ (ಸ್ವಾಯತ್ತ) ಕಾಲೇಜಿನ ಆ್ಯಂಟಿ ರ‍್ಯಾಗಿಂಗ್ ಸೆಲ್, ಎನ್‌ಎಸ್‌ಎಸ್ ಹಾಗೂ ಯೂತ್ ರೆಡ್ ಕ್ರಾಸ್ ಘಟಕಗಳ ಜಂಟಿ ಆಶ್ರಯದಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ, 'ಆ್ಯಂಟಿ ರ‍್ಯಾಗಿಂಗ್ ಸಪ್ತಾಹ'ದ ಅಂಗವಾಗಿ ಆಯೋಜಿಸಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ಪರಸ್ಪರ ಗೌರವ, ಸ್ನೇಹಭಾವ ಹಾಗೂ ಸಹಬಾಳ್ವೆಯ ಮನೋಭಾವ ಅತ್ಯಂತ ಮುಖ್ಯ. ಹಿರಿಯ ವಿದ್ಯಾರ್ಥಿಗಳು ಕಿರಿಯರನ್ನು ಸಹಪಾಠಿಗಳಂತೆ ಗೌರವಿಸಬೇಕು. ರ‍್ಯಾಗಿಂಗ್ ಹೆಸರಿನಲ್ಲಿ ಯಾವುದೇ ರೀತಿಯ ಕಿರುಕುಳ, ಬೆದರಿಕೆ ಅಥವಾ ಮಾನಸಿಕ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಅವರು ಸ್ಪಷ್ಟಪಡಿಸಿದರು. ರ‍್ಯಾಗಿಂಗ್ ತಮಾಷೆಯಲ್ಲ, ಅದೊಂದು ಗಂಭೀರ ಕಾನೂನುಬಾಹಿರ ಕೃತ್ಯ. ಇದರಲ್ಲಿ ತೊಡಗಿಸಿಕೊಂಡರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಹಾಗೂ ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆಯೂ ಗಂಭೀರ ಪರಿಣಾಮ ಬೀರುತ್ತದೆ. ಯಾವುದೇ ಅಹಿತಕರ ಘಟನೆಗಳು ಕಂಡುಬಂದಲ್ಲಿ ತಕ್ಷಣ ಕಾಲೇಜು ಆಡಳಿತ ಮಂಡಳಿ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡುವಂತೆ ಅವರು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪರೀಕ್ಷಾಂಗ ಕುಲ ಸಚಿವ ಡಾ. ನಾರಾಯಣ ಶೆಟ್ಟಿ ಎನ್‌ಪಿ ಮಾತನಾಡಿ, ಸುರಕ್ಷಿತ, ಶಿಸ್ತಿನ ಹಾಗೂ ಆರೋಗ್ಯಕರ ಕ್ಯಾಂಪಸ್ ನಿರ್ಮಾಣಕ್ಕೆ ಸಂಸ್ಥೆಯು ಬದ್ಧವಾಗಿದೆ ಎಂದರು. ಕಾರ್ಯಕ್ರಮದಲ್ಲಿ ಆ್ಯಂಟಿ ರ‍್ಯಾಗಿಂಗ್ ಸೆಲ್‌ನ ಸಂಯೋಜಕರಾದ ಮನು ಡಿ.ಎಲ್. ಹಾಗೂ ಮೇಘಶಾಮ್, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ಸುದೀಪ್ ಬುನ್ನನ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ದಿವ್ಯ ಭಂಡಾರಿ, ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ವರ್ಷ ಸ್ವಾಗತಿಸಿ, ನಂದಿತಾ ವಂದಿಸಿದರು. ದ್ವಿತಿ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ