ಧರ್ಮಸ್ಥಳ : ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್‌ನ ನೇತೃತ್ವದಲ್ಲಿ ಆಯೋಜಿಸಲಾಗುತ್ತಿರುವ 28ನೇ ವರ್ಷದ ಭಜನಾ ಕಮ್ಮಟದ ಪೂರ್ವಭಾವಿ ಸಭೆಯು ಧರ್ಮಸ್ಥಳದ ಅನ್ನಪೂರ್ಣ ಛತ್ರದ ಸಭಾಂಗಣದಲ್ಲಿ ನಡೆಯಿತು. ಸುಳ್ಯ ವಲಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಸವಿತಾ ಸಂದೇಶ್ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಸೆಪ್ಟೆಂಬರ್ 28ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಭಜನಾ ಕಮ್ಮಟದ ವಿವಿಧ ಕಾರ್ಯಕ್ರಮಗಳು ಹಾಗೂ ಸಂಪೂರ್ಣ ರೂಪುರೇಷೆಯ ಕುರಿತು ಭಜನಾ ಪರಿಷತ್ ರಾಜ್ಯ ಸಂಚಾಲಕ ಶ್ರೀ ಜಿ. ಸುಬ್ರಹ್ಮಣ್ಯ ಪ್ರಸಾದ್ ಮಾಹಿತಿ ನೀಡಿದರು. ರಾಜ್ಯಾದ್ಯಂತ ಭಜನಾ ಪರಿಷತ್‌ನ ಪದಾಧಿಕಾರಿಗಳು ಮಾಡುತ್ತಿರುವ ಸಕ್ರಿಯ ಕಾರ್ಯಚಟುವಟಿಕೆಗಳನ್ನು ಅಭಿನಂದಿಸಿದ ಪೂಜ್ಯ ಖಾವಂದರ ಆಪ್ತ ಕಾರ್ಯದರ್ಶಿ ಶ್ರೀ ಎ. ವೀರು ಶೆಟ್ಟಿ ಅವರು ಕ್ಷೇತ್ರದ ಪರವಾಗಿ ಧನ್ಯವಾದ ಸಲ್ಲಿಸಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಭಜನಾ ಪರಿಷತ್ ರಾಜ್ಯಾಧ್ಯಕ್ಷ ಶ್ರೀ ಪಿ. ಚಂದ್ರಶೇಖರ್ ಸಾಲ್ಯಾನ್ ಕೊಯ್ಯೂರು ಅವರ ಸಮ್ಮುಖದಲ್ಲಿ ವಿವಿಧ ತಾಲೂಕುಗಳ ಪದಾಧಿಕಾರಿಗಳು ತಮ್ಮ ಸಾಧನಾ ವರದಿಗಳನ್ನು ಮಂಡಿಸಿದರು. ಕಮ್ಮಟದ ಯಶಸ್ವಿ ಸಂಘಟನೆ ಹಾಗೂ ಪರಿಷತ್ತಿನ ಮುಂದಿನ ಕಾರ್ಯಚಟುವಟಿಕೆಗಳ ಕುರಿತು ಚರ್ಚಿಸಿ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು. ಸಭೆಯಲ್ಲಿ ಪಾಲ್ಗೊಂಡ ಎಲ್ಲ ಪದಾಧಿಕಾರಿಗಳನ್ನು ತಾಳ ಹಾಗೂ ಶಾಲು ನೀಡಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಶ್ರೀ ರಾಜೇಂದ್ರ ಬಸ್ರೂರು ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ರವೀಂದ್ರ ಎಸ್. ಬಸ್ರೂರು ಸ್ವಾಗತಿಸಿದರೆ, ದಕ್ಷಿಣ ಕನ್ನಡ ಜಿಲ್ಲಾ ಸಮನ್ವಯಾಧಿಕಾರಿ ಶ್ರೀ ಸಂತೋಷ್ ಪಿ. ಅಳಿಯೂರು ಕಾರ್ಯಕ್ರಮ ನಿರೂಪಿಸಿದರು.