image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಧರ್ಮಸ್ಥಳದಲ್ಲಿ ವಿಜೃಂಭಣೆಯ ಸಿಂಹ ಸಂಕ್ರಮಣ: ಪಡಿಕಾಳು ವಿತರಣೆ

ಧರ್ಮಸ್ಥಳದಲ್ಲಿ ವಿಜೃಂಭಣೆಯ ಸಿಂಹ ಸಂಕ್ರಮಣ: ಪಡಿಕಾಳು ವಿತರಣೆ

ಉಜಿರೆ: ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಪ್ರಾಚೀನ ಪರಂಪರೆಯಂತೆ  ಸಿಂಹ ಸಂಕ್ರಮಣ (ತುಳುವಿನಲ್ಲಿ ಸೋಣ ಸಂಕ್ರಾಂತಿ) ಪವಿತ್ರ ಆಚರಣೆಯನ್ನು ಶ್ರದ್ಧಾಭಕ್ತಿಯಿಂದ ನೆರವೇರಿಸಲಾಯಿತು. ಈ ಮಂಗಳಕರ ಸಂದರ್ಭದಲ್ಲಿ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದಗಳೊಂದಿಗೆ ಸಾಂಪ್ರದಾಯಿಕ ಪಡಿಕಾಳು ಹಾಗೂ ತೆಂಗಿನ ಎಣ್ಣೆಯನ್ನು ವಿತರಿಸಲಾಯಿತು.

ತುಳುನಾಡಿನ ಸಾಂಸ್ಕೃತಿಕ ಪರಂಪರೆಯಲ್ಲಿ ಸೋಣ ಸಂಕ್ರಾಂತಿಗೆ ವಿಶೇಷ ಧಾರ್ಮಿಕ ಹಾಗೂ ಕೃಷಿ ಸಂಬಂಧಿತ ಮಹತ್ವವಿದೆ. ಧರ್ಮಸ್ಥಳದ ಸುದೀರ್ಘ ಇತಿಹಾಸದಲ್ಲಿ ಪ್ರತಿಯೊಂದು ಸಂಕ್ರಮಣಕ್ಕೂ ತನ್ನದೇ ಆದ ಪವಿತ್ರ ಸ್ಥಾನವಿದ್ದು, ಈ ದಿನದಂದು ಕ್ಷೇತ್ರದ ಸಿಬ್ಬಂದಿ, ಸೇವಕರು ಹಾಗೂ ಸ್ಥಳೀಯರಿಗೆ ಅಗತ್ಯ ಸಾಮಗ್ರಿಗಳ ಪಡಿಕಾಳು ನೀಡುವುದು ಯುಗಯುಗಗಳಿಂದ ನಡೆದುಬಂದ ಶ್ರೇಷ್ಠ ಪದ್ಧತಿಯಾಗಿದೆ. ಕಾರ್ಯಕ್ರಮದಲ್ಲಿ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಆಗಮಿಸಿದ್ದ ಎಲ್ಲ ಭಕ್ತಾದಿಗಳಿಗೆ ಮತ್ತು ಸಿಬ್ಬಂದಿಗೆ ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು.

ಈ ಬಾರಿಯ ಸಿಂಹ ಸಂಕ್ರಮಣದ ಅಂಗವಾಗಿ ಅಪಾರ ಪ್ರಮಾಣದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಗಿದೆ. ಒಟ್ಟು 14,278 ಕೆ.ಜಿ. ಬೆಳ್ತಿಗೆ ಅಕ್ಕಿ, 2,855 ಕೆ.ಜಿ. ಪಡಿಕಾಳು, 1,142 ಕೆ.ಜಿ. ಮೆಣಸು, 2,855 ಕೆ.ಜಿ. ಉಪ್ಪು ಹಾಗೂ 4,459 ಲೀಟರ್ ತೆಂಗಿನ ಎಣ್ಣೆಯನ್ನು ಫಲಾನುಭವಿಗಳಿಗೆ ಹಂಚಲಾಯಿತು. ಕ್ಷೇತ್ರದ ಚತುರ್ವಿಧ ದಾನಗಳಲ್ಲಿ ಮುಖ್ಯವಾದ ಅನ್ನದಾನ ಹಾಗೂ ಸಾಮಾಜಿಕ ಸೌಹಾರ್ದತೆಯ ಭಾಗವಾಗಿ ನಡೆಯುವ ಈ ಕಾರ್ಯಕ್ರಮವು ಧರ್ಮಸ್ಥಳದ ಉದಾರತೆ ಮತ್ತು ಧಾರ್ಮಿಕ ಮಹತ್ಕಾರ್ಯವನ್ನು ಎತ್ತಿಹಿಡಿಯುತ್ತದೆ.

Category
ಕರಾವಳಿ ತರಂಗಿಣಿ