image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಅಭ್ಯರ್ಥಿಗಳು ಕೆಲಸ ಪಡೆಯಲು ತಮ್ಮ ಶ್ರಮದೊಂದಿಗೆ ಆಳ್ವಾಸ್ ಪ್ರಗತಿಯ ವೇದಿಕೆಯನ್ನು ಉಪಯೋಗಿಸಿಕೊಳ್ಳಬೇಕು : ವಿವೇಕ್ ಆಳ್ವಾ

ಅಭ್ಯರ್ಥಿಗಳು ಕೆಲಸ ಪಡೆಯಲು ತಮ್ಮ ಶ್ರಮದೊಂದಿಗೆ ಆಳ್ವಾಸ್ ಪ್ರಗತಿಯ ವೇದಿಕೆಯನ್ನು ಉಪಯೋಗಿಸಿಕೊಳ್ಳಬೇಕು : ವಿವೇಕ್ ಆಳ್ವಾ

ಮೂಡುಬಿದಿರೆ: ಇಲ್ಲಿನ ಆಳ್ವಾಸ್ ಶಿಕ್ಷಣ ಸಂಸ್ಥೆಯ ವತಿಯಿಂದ ಆಯೋಜಿಸಲಾಗಿದ್ದ 16ನೇ ಆವೃತ್ತಿಯ ಬೃಹತ್ ಉದ್ಯೋಗ ಮೇಳ ‘ಆಳ್ವಾಸ್ ಪ್ರಗತಿ-2026’ ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದ್ದು, ಸಾವಿರಾರು ಉದ್ಯೋಗಾಕಾಂಕ್ಷಿಗಳು ಹಾಗೂ ನೂರಾರು ಉದ್ಯೋಗದಾತ ಸಂಸ್ಥೆಗಳನ್ನು ಒಂದೇ ವೇದಿಕೆಯಲ್ಲಿ ಸಮ್ಮಿಲನಗೊಳಿಸಿದೆ. ಮಕ್ಕಳಿಗೆ ತಂದೆ ತಾಯಿ ತಮಗೆ ಸಂಬಂಧ ಪಟ್ಟ ವಿದ್ಯಾರ್ಹತೆಯ ಕೆಲಸ ಹೊಂದಿರುವ ಕಂಪೆನಿ ಯಾವುದೇ ಕೆಲಸ ಆಫರ್ ಮಾಡಿದರೂ ಆ ಕೆಲಸವನ್ನು ಪಡೆದು ಮುಂದೆ ತಮಗೆ ಬೇಕಾದ ಅರ್ಹತೆ ಪಡೆಯಲು ಪ್ರಯತಿಸಲು ಆಳ್ವಾಸ್ ಪ್ರಗತಿಯಂತ ವೇದಿಕೆಯನ್ನು ಸರಿಯಾಗಿ ಬಳಸಬೇಕು ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕ ಟ್ರಸ್ಟಿ ಶ್ರೀ ವಿವೇಕ್ ಆಳ್ವ ತಿಳಿಸಿದರು. ನಗರದ ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿ,

ಎರಡು ದಿನಗಳ ಕಾಲ ನಡೆದ ಈ ಉದ್ಯೋಗ ಮೇಳದಲ್ಲಿ ವಿವಿಧ ಶೈಕ್ಷಣಿಕ ಹಾಗೂ ವೃತ್ತಿಪರ ಹಿನ್ನೆಲೆಯ 332 ಕಂಪನಿಗಳು ಭಾಗವಹಿಸಿದ್ದು, ಒಟ್ಟು 15,539 ಅಭ್ಯರ್ಥಿಗಳು ಪಾಲ್ಗೊಂಡಿದ್ದರು. ಪ್ರಕ್ರಿಯೆಯ ಕೊನೆಯಲ್ಲಿ 2,416 ಅಭ್ಯರ್ಥಿಗಳಿಗೆ ಸ್ಥಳದಲ್ಲೇ (ಸ್ಪಾಟ್) ಉದ್ಯೋಗ ಆಫರ್ ನೀಡಿ ಆಯ್ಕೆ ಮಾಡಲಾಗಿದ್ದು, 6,183 ಅಭ್ಯರ್ಥಿಗಳನ್ನು ವಿವಿಧ ಹುದ್ದೆಗಳ ಮುಂದಿನ ಹಂತದ ನೇಮಕಾತಿ ಪ್ರಕ್ರಿಯೆಗೆ ಶಾರ್ಟ್‌ಲಿಸ್ಟ್ ಮಾಡಲಾಗಿದೆ ಎಂದರು.

ಉದ್ಯೋಗ ಮೇಳದಲ್ಲಿ ಭಾಗವಹಿಸಿದ್ದ 301 ಕಂಪನಿಗಳ ಫಲಿತಾಂಶಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್ (www.alvaspragati.com) ನಲ್ಲಿ ಈಗಾಗಲೇ ಪ್ರಕಟಿಸಲಾಗಿದೆ. ಸಂದರ್ಶನದಲ್ಲಿ ಭಾಗವಹಿಸಿದ ಅಭ್ಯರ್ಥಿಗಳು ತಮ್ಮ ಆಯ್ಕೆ ಅಥವಾ ಶಾರ್ಟ್‌ಲಿಸ್ಟ್ ಸ್ಥಿತಿಯನ್ನು ಈ ವೆಬ್‌ಸೈಟ್ ಮೂಲಕ ಪರಿಶೀಲಿಸಬಹುದಾಗಿದೆ. ಉಳಿದ ಕಂಪನಿಗಳ ಫಲಿತಾಂಶಗಳು ಲಭ್ಯವಾದಂತೆ ಪ್ರಕಟಿಸಲಾಗುವುದು. ಇನ್ನು ಸ್ಥಳದಲ್ಲೇ ನೋಂದಣಿ ಮಾಡಿಕೊಂಡಿದ್ದ ಎಸ್‌ಎಸ್‌ಎಲ್‌ಸಿ, ಪಿಯುಸಿ ಹಾಗೂ ಐಟಿಐ ಅಭ್ಯರ್ಥಿಗಳ ನೇಮಕಾತಿ ವಿವರಗಳನ್ನು ಆಳ್ವಾಸ್ ತಂಡವು ದೂರವಾಣಿ ಕರೆ ಹಾಗೂ ಎಸ್‌ಎಂಎಸ್ ಮೂಲಕ ನೇರವಾಗಿ ತಲುಪಿಸುತ್ತಿದೆ.

ನೇಮಕಾತಿಯಲ್ಲಿ ಉತ್ಪಾದನಾ (Manufacturing) ವಲಯವು ಪ್ರಮುಖ ಕೊಡುಗೆ ನೀಡಿದ್ದು, 75 ಕಂಪನಿಗಳು 924 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, 523 ಅಭ್ಯರ್ಥಿಗಳನ್ನು ನೇರವಾಗಿ ಆಯ್ಕೆ ಮಾಡಿವೆ. ಟಾಟಾ ಎಲೆಕ್ಟ್ರಾನಿಕ್ಸ್ ಸಿಸ್ಟಮ್ಸ್ ಸಂಸ್ಥೆಯು 216 ಅಭ್ಯರ್ಥಿಗಳನ್ನು (ಹೆಚ್ಚು ಮಹಿಳಾ ಅಭ್ಯರ್ಥಿಗಳು) ಆಯ್ಕೆ ಮಾಡಿಕೊಂಡರೆ, ಎಚ್‌ಎಎಲ್ ಮಾಂಡೋ ಸಂಸ್ಥೆಯು ಇಇಇ, ಇಸಿಇ ಹಾಗೂ ಮೆಕ್ಯಾನಿಕಲ್ ವಿಭಾಗದ 99 ಎಂಜಿನಿಯರಿಂಗ್ ಪದವೀಧರರನ್ನು ವಾರ್ಷಿಕ ₹3.4 ಲಕ್ಷ ವೇತನ ಪ್ಯಾಕೇಜ್‌ನಲ್ಲಿ ಚೆನ್ನೈ ಉದ್ಯೋಗಕ್ಕೆ ಆಯ್ಕೆ ಮಾಡಿದೆ. ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಸಂಸ್ಥೆಯು ಚಾರ್ಟರ್ಡ್ ಅಕೌಂಟೆಂಟ್ ಅಭ್ಯರ್ಥಿಯೊಬ್ಬರನ್ನು ವಾರ್ಷಿಕ ₹11 ಲಕ್ಷ ಪ್ಯಾಕೇಜ್‌ಗೆ ಶಾರ್ಟ್‌ಲಿಸ್ಟ್ ಮಾಡಿದ್ದರೆ, ಎಕ್ಸಿಕಾಮ್ ಟೆಲಿ-ಸಿಸ್ಟಮ್ಸ್ ಲಿಮಿಟೆಡ್ 30 ಮಹಿಳಾ ಅಭ್ಯರ್ಥಿಗಳನ್ನು ವಾರ್ಷಿಕ ₹3 ಲಕ್ಷ ಪ್ಯಾಕೇಜ್‌ಗೆ ಆಯ್ಕೆ ಮಾಡಿದೆ.

ಐಟಿ ಮತ್ತು ಐಟಿಇಎಸ್ (IT & ITeS) ಕ್ಷೇತ್ರದಲ್ಲಿ 34 ಕಂಪನಿಗಳು ಭಾಗವಹಿಸಿ 1,301 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿದ್ದು, 96 ಅಭ್ಯರ್ಥಿಗಳಿಗೆ ಸ್ಪಾಟ್ ಆಫರ್ ನೀಡಿವೆ. ವುಡ್‌ರಾಕ್ ಇನ್ನೊಟೆಕ್ ಕಂಪನಿಯು 17 ಜನರನ್ನು ಶಾರ್ಟ್‌ಲಿಸ್ಟ್ ಮಾಡಿ ವರ್ಕ್ ಫ್ರಮ್ ಹೋಮ್ (ಮನೆಯಿಂದಲೇ ಕೆಲಸ) ಅವಕಾಶ ನೀಡಿದೆ. ಪ್ರೋಟಾಕ್ ಸೊಲ್ಯೂಷನ್ಸ್ 39 ಅಭ್ಯರ್ಥಿಗಳನ್ನು, ಹಾಗೂ ಇಲೋಜಿಕ್ಸ್ ಸಂಸ್ಥೆಯು ಆಫ್ರಿಕಾದ ಕಾಂಗೋದಲ್ಲಿ ಅಂತರರಾಷ್ಟ್ರೀಯ ಉದ್ಯೋಗಾವಕಾಶವನ್ನು ಒಬ್ಬ ಅಭ್ಯರ್ಥಿಗೆ ಒದಗಿಸಿದೆ.

ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (BFSI) ಕ್ಷೇತ್ರದಲ್ಲಿ 913 ಅಭ್ಯರ್ಥಿಗಳು ಶಾರ್ಟ್‌ಲಿಸ್ಟ್ ಆಗಿದ್ದು, 211 ಅಭ್ಯರ್ಥಿಗಳಿಗೆ ಸ್ಥಳದಲ್ಲೇ ಉದ್ಯೋಗ ದೊರೆತಿದೆ. ಪ್ರಮುಖ ಬಹುರಾಷ್ಟ್ರೀಯ ಕಂಪನಿಯಾದ EXL Services ಮಾನವ ಸಂಪನ್ಮೂಲ, ಅಕೌಂಟ್ಸ್ ರಿಸೀವಬಲ್ ಮತ್ತು ಪೇಯಬಲ್ ವಿಭಾಗಗಳಲ್ಲಿ 38 ಅಭ್ಯರ್ಥಿಗಳನ್ನು ನೇಮಕ ಮಾಡಿಕೊಂಡಿದೆ. ಔಷಧಿ ಕ್ಷೇತ್ರ (Pharma) ದಲ್ಲಿ ಯೂರೋಫಿನ್ಸ್, ಆರ್‌ಎಲ್‌ ಫೈನ್ ಕೆಮ್, ಸೊಲಾರಾ ಆಕ್ಟಿವ್ ಫಾರ್ಮಾ ಸೈನ್ಸಸ್, ಮಡಾಗ್ಯಾಸ್ಕರ್ಸ್ ಇಂಡಿಯಾ, ಸಾಮಿ ನ್ಯೂಟ್ರಾಸ್ಯುಟಿಕಲ್ಸ್, ವಸುಧಾ ಲೈಫ್ ಸೈನ್ಸ್, ಬಯೋಕಾನ್ ಹಾಗೂ ಗ್ರೂಪ್ ಫಾರ್ಮಾಸ್ಯುಟಿಕಲ್ಸ್ ಸೇರಿದಂತೆ ಹಲವು ಸಂಸ್ಥೆಗಳು ಒಟ್ಟಾಗಿ 159 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, 40 ಅಭ್ಯರ್ಥಿಗಳನ್ನು ಆಯ್ಕೆ ಮಾಡಿವೆ. ಆರೋಗ್ಯ ಮತ್ತು ಅತಿಥ್ಯ ವಲಯದಲ್ಲೂ ಉತ್ತಮ ನೇಮಕಾತಿ ನಡೆದಿದ್ದು, ಮುಂಬೈನ ಬೆಥನಿ ಆಸ್ಪತ್ರೆಯು 103 ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಸೀನಿಕ್ ಸಮ್ಮಿಟ್ ರಿಸಾರ್ಟ್ ಸಂಸ್ಥೆಯು ಪ್ರಕೃತಿ ಚಿಕಿತ್ಸಾ ವಿಭಾಗದ ಪದವೀಧರರನ್ನು ವೆಲ್‌ನೆಸ್ ಥೆರಪಿಸ್ಟ್ ಹುದ್ದೆಗಳಿಗೆ ಆಯ್ಕೆ ಮಾಡಿದೆ.

ಅಂತರರಾಷ್ಟ್ರೀಯ ಉದ್ಯೋಗಾವಕಾಶಗಳ ಭಾಗವಾಗಿ ಜಿಬಿಎಂಟಿ ಸ್ಟ್ರಕ್ಚರಲ್ ಸ್ಟೀಲ್ ಮ್ಯಾನುಫ್ಯಾಕ್ಚರಿಂಗ್ ಇಂಡಸ್ಟ್ರೀಸ್ ಸಂಸ್ಥೆಯು ಯುಎಇ (UAE) ಯಲ್ಲಿನ ಉದ್ಯೋಗಾವಕಾಶಗಳಿಗೆ 9 ಐಟಿಐ, ಡಿಪ್ಲೊಮಾ ಹಾಗೂ ಪದವೀಧರರನ್ನು ವಾರ್ಷಿಕ ₹6 ಲಕ್ಷ ಪ್ಯಾಕೇಜ್‌ನಲ್ಲಿ ಆಯ್ಕೆ ಮಾಡಿದೆ. ಎಕ್ಸ್‌ಪರ್ಟೀಸ್ ಕಾಂಟ್ರಾಕ್ಟಿಂಗ್ ಸಂಸ್ಥೆಯು 117 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಸೌದಿ ಅರೇಬಿಯಾ ಹಾಗೂ ಗುಜರಾತ್‌ನ ಅದಾನಿ ಮುಂದ್ರಾ ಯೋಜನೆಗಳಿಗೆ 13 ಅಭ್ಯರ್ಥಿಗಳನ್ನು ಸ್ಥಳದಲ್ಲೇ ಆಯ್ಕೆ ಮಾಡಿದೆ. ಸಾಮಾಜಿಕ ಬದ್ಧತೆಯನ್ನು ಮೆರೆದ Grow PWD ಸಂಸ್ಥೆಯು ಇಬ್ಬರು ವಿಶೇಷ ಚೇತನ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದೆ. ಕೋಡಾಯಂಗ್ ಸಂಸ್ಥೆಯು ಆಯ್ಕೆಯಾದ ಆರು ಅಭ್ಯರ್ಥಿಗಳಿಗೆ ವಾರ್ಷಿಕ ₹8.36 ಲಕ್ಷದ ಆಕರ್ಷಕ ಪ್ಯಾಕೇಜ್ ನೀಡಿದೆ. ಲುಲು ಇಂಟರ್‌ನ್ಯಾಷನಲ್ ಶಾಪಿಂಗ್ ಮಾಲ್ಸ್ ಪ್ರೈವೇಟ್ ಲಿಮಿಟೆಡ್ 45 ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್ ಮಾಡಿ, ಅವರಲ್ಲಿ ನಾಲ್ವರಿಗೆ ಬೆಂಗಳೂರಿನಲ್ಲಿ ಉದ್ಯೋಗಾವಕಾಶ ನೀಡಿದೆ ಎಂದರು.

ಅಭ್ಯರ್ಥಿಗಳಿಗೆ ನಿರಂತರವಾಗಿ ಉದ್ಯೋಗಾವಕಾಶಗಳು ದೊರೆಯುವಂತೆ ಮಾಡಲು ವಿವಿಧ ಜಿಲ್ಲೆ ಹಾಗೂ ತಾಲೂಕು ಮಟ್ಟದಲ್ಲಿ ತಾಲೂಕು ಮಟ್ಟದ ಘಟಕಗಳನ್ನು ಸ್ಥಾಪಿಸಲು ಆಳ್ವಾಸ್ ಶಿಕ್ಷಣ ಸಂಸ್ಥೆ ಮುಂದಾಗಿದೆ. ‘ಆಳ್ವಾಸ್ ಪ್ರಗತಿ-2026’ ರ ಮೂಲಕ ಲಭಿಸಿದ ಅಭ್ಯರ್ಥಿಗಳ ದತ್ತಾಂಶವನ್ನು (Data) ವರ್ಷಪೂರ್ತಿ ಸಕ್ರಿಯವಾಗಿ ಬಳಸಿಕೊಂಡು ಉದ್ಯೋಗಾವಕಾಶಗಳನ್ನು ಕಲ್ಪಿಸುವ ಕಾರ್ಯ ಮುಂದುವರಿಯಲಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಸ್ವಾಯತ್ತ ಕಾಲೇಜಿನ ಪ್ರಾಂಶುಪಾಲರಾದ ಡಾ. ಕುರಿಯನ್, ಆಳ್ವಾಸ್ ಪ್ರಗತಿ-2026 ರ ಉತ್ಪಾದನಾ ವಲಯದ ಮುಖ್ಯಸ್ಥ ಡಾ. ಕುಮಾರಸ್ವಾಮಿ, ಉದ್ಯೋಗ ನಿಯೋಜನಾ ವಿಭಾಗದ ಮುಖ್ಯಸ್ಥೆ ಕುಮಾರಿ ರಂಜಿತಾ ಆಚಾರ್ಯ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಶ್ರೀ ಪ್ರಸಾದ್ ಶೆಟ್ಟಿ ಮತ್ತು ಆಲ್ವಾಸ್ ತಾಂತ್ರಿಕ ಮಹಾವಿದ್ಯಾಲಯದ ಸಾರ್ವಜನಿಕ ಸಂಪರ್ಕಧಿಕಾರಿಗಳಾದ ಶ್ರೀಮತಿ ದಿಶಾ ಶೆಟ್ಟಿ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ