ಮಂಗಳೂರು: ಲೋಕಕಲ್ಯಾಣ, ಧರ್ಮ ಸಂವರ್ಧನೆ, ಶಾಂತಿ ಹಾಗೂ ಸಮೃದ್ಧಿಯ ಸಂಕಲ್ಪದೊಂದಿಗೆ ಮಂಗಳೂರಿನ ಶ್ರೀ ಯೋಗೇಶ್ವರ ಕದ್ರಿ ಮಠದಲ್ಲಿ ಆಗಸ್ಟ್ 24ರಿಂದ 28ರವರೆಗೆ 5 ದಿನಗಳ ಕಾಲ 'ಶ್ರೀಮದ್ ಲಕ್ಷ್ಮೀನಾರಾಯಣ 6ಮಹಾಯಾಗ' ಆಯೋಜಿಸಲಾಗಿದೆ ಎಂದು ಪತ್ರಿಕಾ ಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಜಗದಾಚಾರ್ಯ ಸ್ವಾಮಿ ಅಖಿಲೇಶಜಿ ಸೇವಾ ಸಂಸ್ಥಾನ್ ಚಾರಿಟೇಬಲ್ ಸಂಸ್ಥೆಯ ಕಾರ್ಯಾಧ್ಯಕ್ಷ ದಿನಕರ್ ಶೆಟ್ಟಿ ತಿಳಿಸಿದರು. ಜಗದಾಚಾರ್ಯ ಸ್ವಾಮಿ ಅಖಿಲೇಶ್‌ಜಿ ಮಹಾರಾಜ್ ಸೇವಾ ಸಂಸ್ಥಾನ ಹಾಗೂ ದಿ ಸ್ಕೈಫನ್ ಫ್ರಂಟ್ ಸಹಯೋಗದೊಂದಿಗೆ ಈ ಧಾರ್ಮಿಕ ಕಾರ್ಯಕ್ರಮ ನಡೆಯಲಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಇಂತಹ ಮಹಾಯಾಗ ಜರುಗುತ್ತಿದೆ. ವಾರಣಾಸಿಯ ಆಚಾರ್ಯ ಶ್ರೀ ಲವಕುಶ ಮಿಶ್ರಾಜಿ ಅವರ ಪೌರೋಹಿತ್ಯದಲ್ಲಿ ವಿವಿಧ ವೈದಿಕ ವಿಧಿವಿಧಾನಗಳು ನೆರವೇರಲಿವೆ ಎಂದರು.
ಆಗಸ್ಟ್ 24ರಂದು ಬೆಳಿಗ್ಗೆ 8 ಗಂಟೆಗೆ ಕದ್ರಿ ಶ್ರೀ ಮಂಜುನಾಥೇಶ್ವರ ದೇವಸ್ಥಾನದಿಂದ ಶ್ರೀ ಯೋಗೇಶ್ವರ ಕದ್ರಿ ಮಠದವರೆಗೆ ವೈಭವದ ಕಳಶಯಾತ್ರೆ ನಡೆಯಲಿದೆ. ಆನಂತರ ಆಗಸ್ಟ್ 28ರವರೆಗೆ ಪ್ರತಿದಿನ ವಿವಿಧ ಧಾರ್ಮಿಕ ವಿಧಿವಿಧಾನಗಳು, ಹೋಮ-ಹವನಗಳು ಹಾಗೂ ಮಂತ್ರಪಠಣ ನಡೆಯಲಿದ್ದು, ಆಗಸ್ಟ್ 28ರಂದು ಮಹಾಯಾಗದ ಮಹಾಪೂರ್ಣಾಹುತಿ ನೆರವೇರಲಿದೆ. ಜಾತಿ-ವರ್ಗ, ಶ್ರೇಷ್ಠ-ಕನಿಷ್ಠ ಎಂಬ ಯಾವುದೇ ಭೇದಭಾವವಿಲ್ಲದೆ ಸರ್ವರೂ ಈ ಯಾಗದಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳಿಗೆ ದೀಕ್ಷೆ ನೀಡುವ ಮೂಲಕ ಯಜ್ಞೋಪವೀತ ಹಾಗೂ ವಸ್ತ್ರಾದಿಗಳನ್ನು ತೊಟ್ಟು ಯಜ್ಞ ಕಾರ್ಯದಲ್ಲಿ ಭಾಗಿಯಾಗಲು ಸಂಘಟಕರು ವ್ಯವಸ್ಥೆ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.
ಸಾಮಾಜಿಕ ಸೌಹಾರ್ದತೆ, ಕುಟುಂಬಗಳಲ್ಲಿ ಶಾಂತಿ ಮತ್ತು ಸಾತ್ವಿಕ ವಾತಾವರಣ ನಿರ್ಮಾಣ ಮಾಡುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಈ ಪುಣ್ಯ ಕಾರ್ಯದಲ್ಲಿ ಸಾರ್ವಜನಿಕರು ಕುಟುಂಬ ಸಮೇತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ, ಶ್ರೀ ಲಕ್ಷ್ಮೀನಾರಾಯಣನ ಕೃಪೆಗೆ ಪಾತ್ರರಾಗಬೇಕೆಂದು ವಿನಂತಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶ್ರೀ ಕಿರಣ್ ಕುಮಾರ್ ಜೋಗಿ ಗೌರವಾಧ್ಯಕ್ಷರು, ಶ್ರೀ ದಿನಕರ್ ಶೆಟ್ಟಿ ಕಾರ್ಯಾಧ್ಯಕ್ಷರು, ಶ್ರೀ ರಾಘವೇಂದ್ರ ರಾವ್ ಕಾರ್ಯಾಧ್ಯಕ್ಷರು, ಶ್ರೀ ರಾಜೇಶ್ ಪವಿತ್ರನ್ ಪ್ರಧಾನ ಸಂಚಾಲಕರು, ಶ್ರೀ ಎಲ್. ಕೆ. ಸುವರ್ಣ ಸಂಘಟನಾ ಕಾರ್ಯದರ್ಶಿ, ಜನಾರ್ಧನ್ ಮತ್ತು ಕಮಲೇಶ್ ಸುವರ್ಣ ಉಪಸ್ಥಿತರಿದ್ದರು.