ಮಂಗಳೂರು : ಮಂಗಳೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇ-ಆಟೋ (ಇಲೆಕ್ಟ್ರಿಕ್ ಆಟೋ) ಚಾಲಕರು ಎದುರಿಸುತ್ತಿರುವ ಪರ್ಮಿಟ್ ಮತ್ತು ವಲಯ ವಿಂಗಡಣೆ (ಝೋನ್ ಲಿಮಿಟೇಶನ್) ಸಮಸ್ಯೆಗಳ ಕುರಿತು ಆಟೋ ಚಾಲಕರ ಸಂಘಟನೆಯು ತೀವ್ರ ಕಳವಳ ವ್ಯಕ್ತಪಡಿಸಿ ಮನವಿ ಸಲ್ಲಿಸಿದೆ. 2025 ರ ಅಕ್ಟೋಬರ್ 30 ಕ್ಕಿಂತ ಮೊದಲು ನೊಂದಣಿಯಾದ ಎಲ್ಲಾ ಇ-ಆಟೋಗಳಿಗೆ ಮಂಗಳೂರು ನಗರಾದ್ಯಂತ ಮುಕ್ತವಾಗಿ ಸಂಚರಿಸಲು ಅವಕಾಶ ನೀಡಬೇಕೆಂಬುದು ಚಾಲಕರ ಪ್ರಮುಖ ಆಗ್ರಹವಾಗಿದೆ ಎಂದು ಪತ್ರಿಕಾಭವನದಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಸಂಘದ ನಿಕಟಪೂರ್ವ ಅಧ್ಯಕ್ಷರಾದ ಪ್ರಜೆಶ್ ತಿಳಿಸಿದರು.
2024 ರ ಜಿಲ್ಲಾಧಿಕಾರಿಗಳ ಆದೇಶದ ಪ್ರಕಾರ ಇ-ಆಟೋಗಳಿಗೆ ನಗರದಲ್ಲಿ ಉಚಿತ ಹಾಗೂ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗಿತ್ತು. ಆದರೆ, ಪ್ರಸ್ತುತ ಬಂದಿರುವ ಹೊಸ ಜಿಲ್ಲಾಧಿಕಾರಿಗಳು ಈ ಹಿಂದಿನ ಆದೇಶವನ್ನು ರದ್ದುಗೊಳಿಸಿ ಹೊಸ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಜಿಲ್ಲಾಧಿಕಾರಿಗಳು ಬದಲಾದ ತಕ್ಷಣ ಸರ್ಕಾರದ ಹಾಗೂ ಆಡಳಿತದ ಆದೇಶಗಳು ಬದಲಾಗುತ್ತಿದ್ದರೆ ತಾವು ಜೀವನ ನಡೆಸುವುದು ಹೇಗೆ ಮತ್ತು ಕುಟುಂಬವನ್ನು ನಿರ್ವಹಿಸುವುದು ಹೇಗೆ ಎಂದು ಕಳವಳ ವ್ಯಕ್ತಪಡಿಸಿದರು.
ಇದಲ್ಲದೆ, ಆಟೋ ಚಾಲಕರ ಸಿಬಿಲ್ (CIBIL) ಸ್ಕೋರ್ ಕಡಿಮೆಯಿದ್ದ ಕಾರಣ ಬ್ಯಾಂಕ್ ಸಾಲ ಸಿಗದೆ, ಹಲವು ಚಾಲಕರು ತಮ್ಮ ತಾಯಿ, ಹೆಂಡತಿ ಅಥವಾ ಕುಟುಂಬದ ಸದಸ್ಯರ ಹೆಸರಿನಲ್ಲಿ ವಾಹನ ಖರೀದಿಸಿದ್ದಾರೆ. ಅವರು ನಗರ ವಿಳಾಸ ಹೊಂದಿದ್ದರೂ ಸಹ ಸಾರಿಗೆ ಇಲಾಖೆಯು ತಾತ್ಕಾಲಿಕ ಪರವಾನಗಿ ನೀಡುತ್ತಿದ್ದು, ಕೋರ್ಟ್ ಆದೇಶ ಬರುವವರೆಗೆ ಪರ್ಮನೆಂಟ್ ಪರವಾನಗಿ ವರ್ಗಾಯಿಸಲು ಸಾಧ್ಯವಿಲ್ಲ ಎಂದು ತಿಳಿಸುತ್ತಿರುವುದು ಚಾಲಕರನ್ನು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಿಸಿದೆ.
ದೇಶದ ಪ್ರಧಾನಮಂತ್ರಿಯವರು 1,250 ಇ-ವಿ ಚಾರ್ಜಿಂಗ್ ಸೆಂಟರ್‌ಗಳನ್ನು ಆರಂಭಿಸುವ ಭರವಸೆ ನೀಡಿ ಇ-ವಾಹನಗಳಿಗೆ ಪ್ರೋತ್ಸಾಹ ನೀಡುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಗಳು ಈ ವಿಚಾರವನ್ನು ಮನವರಿಕೆ ಮಾಡಿಕೊಂಡು ತಮಗೂ ಸೂಕ್ತ ಬೆಂಬಲ ಹಾಗೂ ಸೌಲಭ್ಯಗಳನ್ನು ನೀಡಬೇಕೆಂದು ಚಾಲಕರು ವಿನಂತಿಸಿದ್ದಾರೆ. ಸಿಎನ್‌ಜಿ ಮತ್ತು ಎಲ್‌ಪಿಜಿ ಆಟೋ ಹೊಂದಿರುವ ಮಾಲೀಕರು ಸಹ ಹೊಸದಾಗಿ ಇ-ಆಟೋಗಳನ್ನು ಖರೀದಿಸಿ ಪರ್ಮಿಟ್ ಪಡೆದು ಸಂಚರಿಸುತ್ತಿದ್ದು, ಈ ಬಗ್ಗೆ ಸಾರಿಗೆ ಕಚೇರಿಯಿಂದ ಸೂಕ್ತ ಸ್ಪಷ್ಟನೆ ಹಾಗೂ ಉತ್ತರ ಸಿಗುತ್ತಿಲ್ಲ ಎಂದು ಹೇಳಿದರು. ಪತ್ರಿಕಾಗೋಷ್ಟಿಯಲ್ಲಿ ಮೋಹನ್ ದಾಸ್ - ನೂತನ ಅಧ್ಯಕ್ಷರು, ಕಿರಣ್ ಸಿ.ಆರ್. - ಸದಸ್ಯರು, ಕ್ಲೆಮೆಂಟ್ ಡಿ'ಸೋಜ- ಸದಸ್ಯರು, ಮೈಕಲ್ - ಸದಸ್ಯರು, ಮಹೇಂದ್ರ ಕುಮಾರ್ - ಗ್ರೀನ್ ಸಿಟಿ ತಂಡದ ಉಪಾಧ್ಯಕ್ಷರು, ಪವನ್ ಕುಮಾರ್ - ಕ್ರೀಡಾ ಸಮಿತಿಯ ಸದಸ್ಯರು, ರಾಮ್ ದೇವಾಡಿಗ - ಕೋಶಾಧಿಕಾರಿ ಮತ್ತು ರಾಧಾಕೃಷ್ಣ - ಕಾರ್ಯದರ್ಶಿ ಉಪಸ್ಥಿತರಿದ್ದರು.