image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಿಲಿಕುಳ ಪ್ರವಾಸಿ ತಾಣಕ್ಕೆ ಜೀವಕಳೆ ತುಂಬಲು ಡಾ. ಮೋಹನ್ ಆಳ್ವ ಆಗ್ರಹ

ಪಿಲಿಕುಳ ಪ್ರವಾಸಿ ತಾಣಕ್ಕೆ ಜೀವಕಳೆ ತುಂಬಲು ಡಾ. ಮೋಹನ್ ಆಳ್ವ ಆಗ್ರಹ

ಮಂಗಳೂರು : ಮಂಗಳೂರು ಸಮೀಪದ ವಿಶಾಲವಾದ ಪಿಲಿಕುಳ ಪ್ರವಾಸಿ ತಾಣಕ್ಕೆ ಜೀವಕಳೆ ತುಂಬುವಲ್ಲಿ ಸರ್ಕಾರ, ಜನಪ್ರತಿನಿಧಿಗಳು ಹಾಗೂ ಜಿಲ್ಲಾಡಳಿತ ವಿಫಲವಾಗಿವೆ. ಈ ಸುಂದರ ತಾಣವನ್ನು ತಕ್ಷಣವೇ ಮೇಲ್ದರ್ಜೆಗೇರಿಸಿ ಮೆರುಗು ನೀಡುವ ಕೆಲಸವಾಗಬೇಕು ಎಂದು ಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಅಭಿಪ್ರಾಯಪಟ್ಟಿದ್ದಾರೆ. ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರ ಹಾಗೂ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ಪಿಲಿಕುಳ ಗುತ್ತು ಮನೆಯಲ್ಲಿ ಆಯೋಜಿಸಲಾಗಿದ್ದ 'ಆಟಿ ಕೂಟ' ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಗುತ್ತಿನ ಮನೆ ವರ್ಷಕ್ಕೊಮ್ಮೆ ಬಾಗಿಲು ತೆರೆಯುವ ಬದಲು, ಇಲ್ಲಿ ನಿಶ್ಚಿತಾರ್ಥ, ಸೀಮಂತ, ಹುಟ್ಟುಹಬ್ಬದಂತಹ ಕಾರ್ಯಕ್ರಮಗಳಿಗೆ ಅವಕಾಶ ಕಲ್ಪಿಸಿದರೆ ಜನರು ಬಂದು ಇಲ್ಲಿನ ನೈಸರ್ಗಿಕ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಉಮಾನಾಥ ಎ. ಕೋಟ್ಯಾನ್, ಕಾಲ ಬದಲಾಗಿಲ್ಲ, ನಾವು ಪರಿವರ್ತನೆಯಾಗಿದ್ದೇವೆ. ಹಿಂದಿನ ಕಾಲದ ಆಟಿ ತಿನಿಸುಗಳು ಹಾಗೂ ಸಂಸ್ಕೃತಿಯನ್ನು ಮರೆಯಬಾರದು ಎನ್ನುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಅತ್ಯಂತ ಅರ್ಥಪೂರ್ಣವಾಗಿವೆ ಎಂದರು. ಇದೇ ವೇಳೆ ನಿವೃತ್ತ ಶಿಕ್ಷಕ ಸುಧಾಕರ ರಾವ್ ಪೇಜಾವರ ಅವರು ಆಟಿ ತಿಂಗಳ ಸಾಂಸ್ಕೃತಿಕ ಮಹತ್ವದ ಕುರಿತು ವಿಶೇಷ ಉಪನ್ಯಾಸ ನೀಡಿದರು.

ಈ ಸಮಾರಂಭದಲ್ಲಿ ನಿಟ್ಟೆ ವಿವಿ ಸಹ ಕುಲಾಧಿಪತಿ ಡಾ. ಎಂ. ಶಾಂತಾರಾಮ ಶೆಟ್ಟಿ, ಮಾಜಿ ಶಾಸಕ ಜೆ. ಆರ್. ಲೋಬೊ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ, ಎ.ಜೆ. ಸಮೂಹ ಸಂಸ್ಥೆಗಳ ಅಧ್ಯಕ್ಷ ಎ.ಜೆ. ಶೆಟ್ಟಿ, ಮೂಡುಶೆಡ್ಡೆ ಗ್ರಾ.ಪಂ. ಮಾಜಿ ಅಧ್ಯಕ್ಷ ಶಿವರಾಮ ಮಲ್ಲಿ, ಡಾ. ಶ್ರೀನಿಕೇತನ, ಕಿಶೋರ್ ಆಳ್ವ ಹಾಗೂ ಪಂಕಜ್ ಕುಮಾರ್ ಸುಮನ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು. ಪ್ರಾಧಿಕಾರದ ಆಯುಕ್ತ (ಪ್ರಭಾರ) ಡಾ. ಅರುಣ್ ಕುಮಾರ್ ಶೆಟ್ಟಿ ಸ್ವಾಗತಿಸಿ, ಸಂಸ್ಕೃತಿ ಗ್ರಾಮದ ಮುಖ್ಯಸ್ಥ ಡಾ. ನಿತಿನ್ ಬಾಳೆಪುಣಿ ವಂದಿಸಿದರು. ಗಣೇಶ್ ಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಲಿಗ್ರಾಮದ ಶ್ರೀ ಗುರು ಮಾರುತಿ ಹೌಂದೇರಾಯನ ಓಲಗ ಕಲಾ ತಂಡದವರಿಂದ 'ಹೌಂದೇರಾಯನ ಓಲಗ' ಜಾನಪದ ನೃತ್ಯ ರೂಪಕ ಪ್ರದರ್ಶನಗೊಂಡಿತು.

Category
ಕರಾವಳಿ ತರಂಗಿಣಿ